ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್ ಮುಸ್ಸಾವೀರ್ ಹುಸೈನ್ ಶಾಜೀಬ್ ಹಾಗೂ ಉಗ್ರ ಅಬ್ದುಲ್ ಮತೀನ್ ಅಹ್ಮದ್ ತಾಹನ ಫೋಟೋ ಬಿಡುಗಡೆ ಮಾಡಿರುವ ಎನ್ಐಎ ಇವರ ಸುಳಿವು ನೀಡುವವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ರಾಮೇಶ್ವರಂ ಕೆಫ್ ಸ್ಫೋಟ ಪ್ರಕರಣ ಸಂಬಂಧ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿ ಮುಜಾಮುಲ್ ಶರೀಫ್ ಎಂಬಾತನನ್ನು ನಿನ್ನೆ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತಿಬ್ಬರ ಪ್ರಮುಖ ಆರೋಪಗಳ ಪತ್ತೆಗೆ ಬಲೆ ಬೀಸಿದೆ. ‘ಬಾಂಬರ್’ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಉಗ್ರ ಅಬ್ದುಲ್ ಮತೀನ್ ಅಹ್ಮದ್ ತಾಹಾನ ಫೋಟೋವನ್ನು ಬಿಡುಗಡೆ ಮಾಡಲಾಗಿದ್ದು, ಈ ಆರೋಪಿಗಳ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಎನ್ಐಎ ಘೋಷಣೆ ಮಾಡಿದೆ.
ಬೆಂಗಳೂರಿನ ಬ್ರೂಕ್‌ಫೀಲ್ಡ್‌ನ ಐಟಿಪಿಎಲ್ ರಸ್ತೆಯಲ್ಲಿರುವ ಜನನಿಬಿಡ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಮಾರ್ಚ್ 1 ರಂದು ಹ್ಯಾಂಡ್‌ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡ ನಂತರ ನೌಕರರು ಮತ್ತು ಗ್ರಾಹಕರು ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಆಸ್ತಿಪಾಸ್ತಿಗೂ ಹಾನಿಯಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಬಯಲಿಗೆಳೆಯಲು ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ.