ಟೆಹ್ರಾನ್: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿ ಏಳು ವಾರಗಳು ಕಳೆದಿದ್ದರೂ, ಅವರ ಅಂತ್ಯಸಂಸ್ಕಾರ ಇನ್ನೂ ನೆರವೇರಿಲ್ಲದಿರುವುದು ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಫೆಬ್ರವರಿ 28 ರಂದು ಇಸ್ರೇಲ್ ಮತ್ತು ಅಮೆರಿಕದ ಜಂಟಿ ವಾಯುದಾಳಿಯಲ್ಲಿ ಖಮೇನಿ ಹತರಾಗಿದ್ದರು.
ಅಂತ್ಯಕ್ರಿಯೆ ವಿಳಂಬಕ್ಕೆ ಕಾರಣವೇನು?
ಸಾಮಾನ್ಯವಾಗಿ ಇಸ್ಲಾಂ ಸಂಪ್ರದಾಯದಂತೆ ಮೃತಪಟ್ಟ ತಕ್ಷಣ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದರೆ ಖಮೇನಿ ವಿಷಯದಲ್ಲಿ ಸುಮಾರು 50 ದಿನಗಳ ವಿಳಂಬವಾಗುತ್ತಿರುವುದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ…
ಭದ್ರತಾ ಆತಂಕ: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ಸತತ ಬಾಂಬ್ ದಾಳಿಗಳು ಮುಂದುವರಿದಿವೆ. ಬೃಹತ್ ಮಟ್ಟದಲ್ಲಿ ಅಂತ್ಯಸಂಸ್ಕಾರ ಆಯೋಜಿಸಿದರೆ ಆ ಜನಸಂದಣಿಯನ್ನೇ ಗುರಿಯಾಗಿಸಿ ದಾಳಿ ನಡೆಯಬಹುದು ಎಂಬ ಭೀತಿಯಲ್ಲಿ ಇರಾನ್ ಸರ್ಕಾರವಿದೆ.
ಇರಾನ್ನಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿದೆ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ದಂಗೆ ಏಳಬಹುದು ಎಂಬ ಆತಂಕವೂ ಆಡಳಿತಾರೂಢ ಇಸ್ಲಾಮಿಕ್ ಗಣರಾಜ್ಯಕ್ಕಿದೆ.
ಸತ್ಯಾಂಶ ಹೊರಬರದಂತೆ ತಡೆಯಲು ಇರಾನ್ನಲ್ಲಿ ಕಳೆದ 50 ದಿನಗಳಿಂದ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂತ್ಯಸಂಸ್ಕಾರ ಎಲ್ಲಿ ನಡೆಯಬಹುದು?
ವರದಿಗಳ ಪ್ರಕಾರ, ಇರಾನ್ ಅಧಿಕಾರಿಗಳು ಖಮೇನಿ ಅವರ ಅಂತ್ಯಸಂಸ್ಕಾರವನ್ನು ಅವರ ಹುಟ್ಟೂರಾದ ಮಶಾದ್ (Mashhad) ನಗರದಲ್ಲಿ ನಡೆಸಲು ಯೋಜಿಸುತ್ತಿದ್ದಾರೆ. ತುರ್ಕಮೆನಿಸ್ತಾನ್ ಗಡಿಯ ಸಮೀಪವಿರುವ ಈ ನಗರವು ಶಿಯಾ ಮುಸ್ಲಿಮರಿಗೆ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಪರಿಸ್ಥಿತಿ ತಿಳಿಯಾದ ನಂತರವಷ್ಟೇ ಅಂತಿಮ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.
