ನವದೆಹಲಿ : ಆಮ್ ಆದ್ಮಿ ಪಾರ್ಟಿಯು ತನ್ನ ಪ್ರಭಾವಿ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಕೆಳಗಿಳಿಸಿದೆ.
2023ರಿಂದ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಚಡ್ಡಾ ಅವರ ಬದಲಿಗೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬದಲಾವಣೆಯ ಕುರಿತು ರಾಜ್ಯಸಭಾ ಸಚಿವಾಲಯಕ್ಕೆ ಅಧಿಕೃತ ಪತ್ರವನ್ನು ರವಾನಿಸಲಾಗಿದೆ. ವಿಶೇಷವೆಂದರೆ, ಈ ಪತ್ರದಲ್ಲಿ ಸಂಸತ್ತಿನಲ್ಲಿ ಮಾತನಾಡಲು ಚಡ್ಡಾ ಅವರಿಗೆ ಹೆಚ್ಚಿನ ಸಮಯವನ್ನು ನೀಡಬಾರದು ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಠಾತ್ ಬದಲಾವಣೆಯು ಆಪ್ ಪಾಳಯದಲ್ಲಿ ಭಿನ್ನಮತ ಉಂಟಾಗಿದೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನೂತನ ಉಪನಾಯಕ ಅಶೋಕ್ ಮಿತ್ತಲ್, “ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಇದು ಕೇವಲ ವಾಡಿಕೆಯ ಬದಲಾವಣೆ. ಎಲ್ಲರಿಗೂ ಅವಕಾಶ ನೀಡಬೇಕು ಎಂಬುದು ಪಕ್ಷದ ಆಶಯ” ಎಂದು ಸ್ಪಷ್ಟಪಡಿಸಿದ್ದಾರೆ.
ಮೌನಕ್ಕೆ ಶರಣಾದ ಚಡ್ಡಾ
ಕಳೆದ ಕೆಲವು ಸಮಯದಿಂದ ಆಮ್ ಆದ್ಮಿ ಪಾರ್ಟಿಯ ಪ್ರಮುಖ ಬೆಳವಣಿಗೆಗಳ ಬಗ್ಗೆ ರಾಘವ್ ಚಡ್ಡಾ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಫೆಬ್ರವರಿಯಲ್ಲಿ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಎಲ್ಲ ಆರೋಪಗಳಿಂದ ಮುಕ್ತರಾದಾಗಲೂ ಚಡ್ಡಾ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿರಲಿಲ್ಲ. ಅಷ್ಟೇ ಅಲ್ಲದೆ, ಕೇಜ್ರಿವಾಲ್ ನಡೆಸಿದ ಮಹತ್ವದ ಪತ್ರಿಕಾಗೋಷ್ಠಿ ಮತ್ತು ಜಂತರ್ ಮಂತರ್ನಲ್ಲಿ ನಡೆದ ‘ಜನಸಭಾ’ ಕಾರ್ಯಕ್ರಮದಿಂದಲೂ ಅವರು ದೂರ ಉಳಿದಿದ್ದರು.
