ಶಿವಮೊಗ್ಗ : ದೇಶದ ಪ್ರಗತಿಯಾಗಬೇಕಾದರೆ ಮಹಿಳೆಯರ ಪ್ರಗತಿಯಾಗಬೇಕು. ಮಹಿಳೆ ಪ್ರಗತಿ ಹೊಂದಲು ಶಿಕ್ಷಣ ಮತ್ತು ಕುಟುಂಬದ ಬೆಂಬಲ ಅತಿ ಅವಶ್ಯ ಎಂದು ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯಡಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
೧೯೦೮ ರಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಿದ ಮಹಿಳಾ ಕಾರ್ಮಿಕರಿಗೆ ನಮನಗಳು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಘೋಷಣೆಯಾಗಲು ಈ ಹೋರಾಟವೂ ಕಾರಣವಾಗಿದೆ. ಮನೆಯಿಂದ ಸಮಾಜ ಶುರುವಾಗುತ್ತದೆ.ಅಲ್ಲಿಂದಲೇ ಅವಕಾಶ ಸಿಕ್ಕರೆ ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು ಶಿಕ್ಷಣ ಪಡೆಯುವುದು ಬಹಳ ಮುಖ್ಯವಾಗಿದೆ. ಭೂಮಿಯಿಂದ ಆಕಾಶದವರೆಗೆ ಇಂದು ಎಲ್ಲ ಕ್ಷೇತ್ರದಲ್ಲಿ ಹೆಣ್ಣು ಮುಂದೆ ಬರುತ್ತಿ ದ್ದಾಳೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣ ಎಂದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಹೆಣ್ಣು ಸಬಲಳು. ನೋವನ್ನು ಸಹಿಸಿ ಆಕೆ ನಗುತ್ತಾಳೆ. ದೇವರು ಆಕೆಗೆ ವಿಶೇಷ ಶಕ್ತಿ ನೀಡಿದ್ದಾರೆ. ಸಹನೆ, ಪ್ರೀತಿಯನ್ನು ಹೆಚ್ಚಿಸುವ ಶಕ್ತಿಯನ್ನು ಸೃಷ್ಟಿ ಆಕೆಗೆ ನೀಡಿದೆ. ಮನೆಯ ಎಲ್ಲ ಕೆಲಸ ನಿರ್ವಹಣೆ ಮಾಡಿ, ಮನೆಯ ಮಂದಿಯನ್ನು, ಮಕ್ಕಳನ್ನು ಗುರುವಾಗಿ, ಮನೆಯ ವೈದ್ಯೆಯಾಗಿ, ವಕೀಲಳಾಗಿ, ಹೀಗೆ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾಳೆ. ಅದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಮಾತೆಯ ಮೌಲ್ಯವಿದೆ ಎಂದರು.
ಕರ್ನಾಟಕ ರಾಜ್ಯ ಎಸ್ ಸಿ /ಎಸ್ ಟಿ ಅಲೆಮಾರಿಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ,ಸೂಡಾ ಅಧ್ಯಕ್ಷರಾದ ಹೆಚ್ ಎಸ್. ಸುಂದರೇಶ್,ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಆರ್ ಬಣಕಾರ್, ಅಕ್ಕ ಪಡೆ ಎಎಸ್ ಐ ಹೇಮಾ, ಇತರರು ಪಾಲ್ಗೊಂಡಿದ್ದರು.
