ಗುಂಟೂರು(ಆಂಧ್ರಪ್ರದೇಶ): ಸಾಮಾನ್ಯವಾಗಿ ಎರಡು ಕೋಟಿ ರೂಪಾಯಿ ಎಂದರೆ ಒಂದು ಐಷಾರಾಮಿ ಫ್ಲಾಟ್ ಅಥವಾ ಸೂಪರ್ ಕಾರ್ ಖರೀದಿಸಬಹುದು. ಆದರೆ ಆಂಧ್ರಪ್ರದೇಶದ ಗುಂಟೂರು ಮೂಲದ ಉದ್ಯಮಿಯೊಬ್ಬರು ಕೇವಲ ತನ್ನ ಕಾರಿನ ನಂಬರ್ ಪ್ಲೇಟ್ಗಾಗಿ ಬರೋಬ್ಬರಿ 2.08 ಕೋಟಿ ರೂಪಾಯಿ ಖರ್ಚು ಮಾಡಿ ದೇಶದಾದ್ಯಂತ ಸುದ್ದಿಯಾಗಿದ್ದಾರೆ.
ಇದು ಭಾರತದ ಅತ್ಯಂತ ದುಬಾರಿ ನಂಬರ್ ಪ್ಲೇಟ್!
ಆಂಧ್ರದ ಕಿರಣ್ ಕೊಲ್ಪಾಕುಲ( Kiran Kolpakula) ಎಂಬುವವರೇ ಈ ದಾಖಲೆ ಬರೆದ ಸಾಹಸಿ. ಇತ್ತೀಚೆಗೆ ನಡೆದ ಹರಾಜಿನಲ್ಲಿ ಅವರು ‘DDC 0001’ ಎಂಬ ಫ್ಯಾನ್ಸಿ ನಂಬರ್ ಅನ್ನು 2.08 ಕೋಟಿ ರೂ. ನೀಡಿ ಖರೀದಿಸಿದ್ದಾರೆ. ಈ ಮೂಲಕ ಭಾರತದ ಆಟೋಮೊಬೈಲ್ ಇತಿಹಾಸದಲ್ಲೇ ನಂಬರ್ ಪ್ಲೇಟ್ಗಾಗಿ ಅತಿ ಹೆಚ್ಚು ಹಣ ವ್ಯಯಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
‘ಬಿಗ್ ಬಾಯ್ ಟಾಯ್ಸ್’ (Big Boy Toyz) ಎಂಬ ಐಷಾರಾಮಿ ಕಾರುಗಳ ಡೀಲರ್ಶಿಪ್ ಆಯೋಜಿಸಿದ್ದ ಹರಾಜಿನಲ್ಲಿ ಈ ನಂಬರ್ ಮಾರಾಟವಾಗಿದೆ.
ಕಾರಿಗಿಂತ ನಂಬರ್ ದುಬಾರಿ: ವಿಶೇಷವೆಂದರೆ, ಈ 2 ಕೋಟಿ ಬೆಲೆಯ ನಂಬರ್ ಪ್ಲೇಟ್ ಅನ್ನು ಕಿರಣ್ ಅವರು ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಕಾರಿಗೆ ಅಳವಡಿಸಿದ್ದಾರೆ ಎನ್ನಲಾಗಿದೆ. ಕಾರಿನ ಬೆಲೆ 8ಲಕ್ಷ ಇದ್ದರೆ ಫ್ಯಾನ್ಸಿ ನಂಬರ್ ಬೆಲೆಯೇ ನೂರು ಪಟ್ಟು ಹೆಚ್ಚಿರುವುದು ನೆಟ್ಟಿಗರ ಹುಬ್ಬೇರಿಸಿದೆ.
ತೆಲುಗು ರಾಜ್ಯಗಳಲ್ಲಿ ಸಂಖ್ಯಾಶಾಸ್ತ್ರ (Numerology) ಮತ್ತು ಫ್ಯಾನ್ಸಿ ನಂಬರ್ಗಳ ಮೇಲೆ ಜನರಿಗಿರುವ ಒಲವು ಮತ್ತೊಮ್ಮೆ ಸಾಬೀತಾಗಿದೆ. ಸಾಮಾನ್ಯವಾಗಿ 0001 ನಂಬರ್ಗೆ ಭಾರಿ ಬೇಡಿಕೆ ಇರುತ್ತದೆ, ಆದರೆ ಅದು 2 ಕೋಟಿ ದಾಟಿರುವುದು ಇದೇ ಮೊದಲು.
“ರೇಂಜ್ ರೋವರ್ನಂತಹ ಐಷಾರಾಮಿ ಕಾರುಗಳೇ 1.5 ರಿಂದ 2 ಕೋಟಿ ರೂ.ಗೆ ಸಿಗುತ್ತವೆ. ಅಂತಹದರಲ್ಲಿ ಕೇವಲ ನಂಬರ್ಗಾಗಿ ಇಷ್ಟೊಂದು ಹಣ ವ್ಯಯಿಸಿರುವುದು ನಿಜಕ್ಕೂ ಅಚ್ಚರಿ,” ಎಂದು ವಾಹನ ಪ್ರಿಯರು ಚರ್ಚಿಸುತ್ತಿದ್ದಾರೆ.
