Trending

‘ಅಧಿಕಾರ ಶಾಶ್ವತವಲ್ಲ, ತಾಳ್ಮೆಯೂ ಶಾಶ್ವತ ಅಲ್ಲ, ನಮ್ಮಣ್ಣನ ಹಣೆಬರಹದಲ್ಲಿ ಇದ್ದರೆ ಸಿಎಂ ಆಗ್ತಾರೆ’: ಡಿ ಕೆ ಸುರೇಶ್

Spread the love

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಷಯ ತಣ್ಣಗಾಗಿಲ್ಲ, ಸಂಕ್ರಾಂತಿ ಕಳೆದರೂ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಡಿಸಿಎಂ ಡಿ ಕೆ ಶಿವಕುಮಾರ್ ದಾವೋಸ್ ಗೆ ಪ್ರಯಾಣಿಸಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದರು.

ಇವೆಲ್ಲದರ ಮಧ್ಯೆ ಇಂದು ಡಿ ಕೆ ಶಿವಕುಮಾರ್ ಅವರ ಸೋದರ ಮಾಜಿ ಸಂಸದ ಡಿ ಕೆ ಸುರೇಶ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳ ಕುರಿತು ತುಂಬಾ ಮಾರ್ಮಿಕವಾಗಿ ಮಾತನಾಡಿದ್ದಾರೆ. ಅವರ ಹಲವು ಹೇಳಿಕೆಗಳು ನಾಯಕತ್ವ ಬದಲಾವಣೆಗೆ ಸಂಬಂಧಪಟ್ಟಂತೆ ಇರುವ ಗೊಂದಲಗಳಿಗೆ ಹೊಂದಿಕೆಯಾಗುವಂತೆ ಇದೆ.

ಪಕ್ಷದ ವರಿಷ್ಠ, ಲೋಕಸಭೆ ನಾಯಕ ರಾಹುಲ್ ಗಾಂಧಿ ಅವರು ತಾಳ್ಮೆಯಿಂದ ಇರಿ ಎಂದು ಹೇಳಿದ್ದಾರೆ, ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿದಾಗಲೂ ಕೂಡ ಅದೇ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸೂಕ್ತ ಸಂದರ್ಭದಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ, ಪಕ್ಷ ಹಿತದೃಷ್ಟಿಯಿಂದ, ಶಾಸಕರ ಹಿತದೃಷ್ಟಿಯಿಂದ ಕಾಯುತ್ತಿದ್ದೇವೆ ಎಂದು ಡಿಕೆ ಸುರೇಶ್ ಹೇಳಿದರು.

ಜನವರಿ ಅಂತ್ಯಕ್ಕಿಲ್ಲ ಹೈಕಮಾಂಡ್ ಬುಲಾವ್

ಜನವರಿ ಅಂತ್ಯಕ್ಕೆ ದೆಹಲಿಗೆ ಹೈಕಮಾಂಡ್ ಬುಲಾವ್ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ, ಡಿಕೆ ಸುರೇಶ್, 29 ಕ್ಕೆ ಅಧಿವೇಶನ ಇದೆಯಲ್ಲಪ್ಪ, ಅಧಿವೇಶನ ನಡೆಯುತ್ತಿರುವಾಗ ಹೇಗೆ? ರಾಜಕಾರಣಿಗಳಿಗೆ ಬಿಡುವೇ ಇರಲ್ಲ, ರಾಜಕಾರಣಿಗಳಿಗೆ ನಿದ್ದೆ ಇರಲ್ಲ, ಊಟ ಇರಲ್ಲ, ನೆಮ್ಮದಿ ಇರಲ್ಲ, ಅಧಿಕಾರವೂ ಶಾಶ್ವತ ವಲ್ಲ, ತಾಳ್ಮೆಯೂ ಶಾಶ್ವತ ಅಲ್ಲ ಎಂದರು. ಅವರ ಈ ಮಾತು ಸಿಎಂ ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಹೇಳಿದಂತಿತ್ತು.

ಎಷ್ಟು ವರ್ಷ ಕಾಯುತ್ತೀರಾ ಎಂಬ ಪ್ರಶ್ನೆಗೆ ಅವರು, ಕಾಯೋಣ ದೇವರ ಇಚ್ಛೆ, ರಾಜಕೀಯದಲ್ಲಿ ಯಾವುದು ಶಾಶ್ವತ ಅಲ್ಲ, ಅಧಿಕಾರನೂ ಶಾಶ್ವತ ಅಲ್ಲ, ತಾಳ್ಮೆನೂ ಶಾಶ್ವತ ಅಲ್ಲ ಎಂದು ಹೇಳಿದರು.

[pj-news-ticker]