Trending

ವಿರಾಟ್‌ ಕೊಹ್ಲಿ ಹೋರಾಟದ ಶತಕ ವ್ಯರ್ಥ, ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್‌

Spread the love

ಇಂದೋರ್‌: ವಿರಾಟ್‌ ಕೊಹ್ಲಿಯ ಹೋರಾಟದ ಶತಕದ ಹೊರತಾಗಿಯೂ ಭಾರತ ತಂಡ, ಮೂರನೇ ಹಾಗೂ ಏಕದಿನ ಸರಣಿಯ (IND vs NZ) ನಿರ್ಣಾಯಕ ಪಂದ್ಯದಲ್ಲಿ 41 ರನ್‌ಗಳಿಂದ ನ್ಯೂಜಿಲೆಂಡ್‌ ವಿರುದ್ಧ ಸೋಲು ಅನುಭವಿಸಿತು.

ಆ ಮೂಲಕ ಏಕದಿನ ಸರಣಿಯನ್ನು 1-2 ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ಟೀಮ್‌ ಇಂಡಿಯಾ ತವರು ಅಭಿಮಾನಿಗಳ ಎದುರು ಮುಖಭಂಗ ಅನುಭವಿಸಿತು. ಇನ್ನು ಡ್ಯಾರಿಲ್‌ ಮಿಚೆಲ್‌ ಹಾಗೂ ಗ್ಲೆನ್‌ ಫಿಲಿಪ್ಸ್‌ ಶತಕಗಳ ಬಲದಿಂದ ಕಿವೀಸ್‌ ತಂಡ, ಮೂರನೇ ಪಂದ್ಯ ಗೆದ್ದು ಏಕದಿನ ಸರಣಿಯನ್ನು ಇದೇ ಮೊದಲ ಬಾರಿ ಭಾರತದಲ್ಲಿ ಗೆದ್ದುಕೊಂಡಿತು.

ಈ ಪಂದ್ಯದಲ್ಲಿ ಶತಕ ಸಿಡಿಸಿದ ಡ್ಯಾರಿಲ್‌ ಮಿಚೆಲ್‌ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಭಾನುವಾರ ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ನೀಡಿದ್ದ 338 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ವಿರಾಟ್‌ ಕೊಹ್ಲಿ ಶತಕ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಮತ್ತು ಹರ್ಷಿತ್‌ ರಾಣಾ ಅರ್ಧಶತಕಗಳ ಹೊರತಾಗಿಯೂ 46 ಓವರ್‌ಗಳಿಗೆ 296 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಆ ಮೂಲಕ ಸತತ ಎರಡು ಪಂದ್ಯಗಳನ್ನು ಸೋತು ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ, ಏಕದಿನ ಸರಣಿಯನ್ನು ಕಳೆದುಕೊಂಡಿತು.

ವಿರಾಟ್‌ ಕೊಹ್ಲಿ ಹೋರಾಟದ ಶತಕ ವ್ಯರ್ಥ

ಭಾರತ ತಂಡದ ಚೇಸಿಂಗ್‌ನಲ್ಲಿ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ, ಕೊನೆಯವರೆಗೂ ಹೋರಾಟ ನಡೆಸಿದರು.

ಅವರು ಆಡಿದ 108 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 124 ರನ್‌ಗಳನ್ನು ಗಳಿಸಿದರು. ಆ ಮೂಲಕ 54ನೇ ಒಡಿಐ ಶತಕವನ್ನು ಪೂರ್ಣಗೊಳಿಸಿದರು. ಅಲ್ಲದೆ, ನಿರ್ಣಾಯಕ ಅರ್ಧಶತಕಗಳನ್ನು ಗಳಿಸಿದ ನಿತೀಶ್‌ ಕುಮಾರ್‌ ರೆಡ್ಡಿ (53 ರನ್‌) ಅವರು ಜೊತೆ 88 ರನ್‌ ಹಾಗೂ ಹರ್ಷಿತ್‌ ರಾಣಾ (52 ರನ್‌) ಅವರ ಜೊತೆ 99 ರನ್‌ಗಳ ಜೊತೆಯಾಟವನ್ನು ಆಡಿದರು.

ಇದರೊಂದಿಗೆ ಭಾರತ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ, ಕ್ರಿಸಿಯನ್‌ ಕ್ಲಾರ್ಕ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್‌ ಕೊಟ್ಟರು. ಆ ಮೂಲಕ ಭಾರತ ತಂಡದ ಗೆಲ್ಲುವ ಕನಸು ಭಗ್ನವಾಯಿತು.

 

[pj-news-ticker]