ಶಿವಮೊಗ್ಗ: ಶಿವಮೊಗ್ಗದಿಂದ ಶಬರಿಮಲೆಗೆ ತೆರಳಿದ್ದ ಯಾತ್ರಾತ್ರಿಗಳು ಕೇರಳದ ಏರುಮೇಲಿ ಎಂಬಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕದ ವಾಹನಗಳನ್ನ ತಡೆದು ನಿಲ್ಲಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಶಿವಮೊಗ್ಗ, ಭದ್ರಾವತಿಯ ಮಾಲಾಧಾರಿಗಳು ಪ್ರತಿಭಟನೆ ನಡೆಸಿದ್ದಾರೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ಏರುಮೇಲಿ ಎಂಬಲ್ಲಿ ಪ್ರತಿಭಟನೆ ನಡೆಸಿದ್ದು, ಕೇರಳ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಶಬರಿಮಲೆ 45 ಕಿ.ಮೀ ದೂರದಲ್ಲೇ ವಾಹನ ತಡೆದಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ವಾಹನ ತಡೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿವಿಧ ಜಿಲ್ಲೆಯಿಂದ ತೆರಳಿದ ಅಯ್ಯಪ್ಪ ಮಾಲಾಧಾರಿಗಳು ಕಂಗಾಲಾಗಿದ್ದು, ಟಿಪಿ ಕಟ್ಟಿ ಬಂದರೂ ಸಹ ನಮ್ಮ ವಾಹನಗಳನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಕೇರಳ ಪೊಲೀಸರ ವಿರುದ್ಧ ಅಯ್ಯಪ್ಪ ಭಕ್ತರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದು, ಕೇರಳ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪ್ರತಿವರ್ಷ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೈ ಯಾತ್ರೆ ಕೈಗೊಳ್ಳುತ್ತಾರೆ. ಲಕ್ಷಾಂತರ ಭಕ್ತರು ಕೇರಳದ ಶಬರಿಮಲೈಗೆ ತೆರಳಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ತಮ್ಮ ವ್ರತವನ್ನು ಪೂರ್ಣಗೊಳಿಸುತ್ತಾರೆ. ರಾಜ್ಯದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕರ್ನಾಟಕದಿಂದ ವಾಹನ ಮಾಡಿಕೊಂಡು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಆದ್ರೆ ಕೇರಳದಲ್ಲಿ ಕರ್ನಾಟಕ ನೋಂದಣಿ ವಾಹನಗಳಿಗೆ ನಿರ್ಬಂಧ ಹೇರಿರುವ ಆರೋಪ ಕೇಳಿಬಂದಿದೆ. ಇದರಿಂದ ಕೆರಳಿದ ಅಯ್ಯಪ್ಪಸ್ವಾಮಿ ಭಕ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದೇವೆ. ಮತ್ತೆ ಕೇರಳ ಬಸ್ ಗಳಿಗೆ ಹಣ ಕೊಟ್ಟು ಹೋಗಬೇಕು ಅಂತಿದ್ದಾರೆ. ಇದು ಕೇರಳ ಸರಕಾರದಿಂದ ನಮ್ಮ ಮೇಲಾಗ್ತಿರುವ ದೌರ್ಜನ್ಯ. ಇದರಿಂದ ಕೂಡಲೇ ಸಿಎಂ ಸಿದ್ದರಾಮಯ್ಯನವರು ಕೇರಳ ಸರಕಾರದ ಜೊತೆ ಮಾತಾಡಿ ನಮ್ಮ ವಾಹನ ಬಿಡಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
