ಶಿವಮೊಗ್ಗ : ಪತ್ರಕರ್ತರ ಪಿಂಚಣಿ ವ್ಯವಸ್ಥೆಗೂ ಸಮಗ್ರ ಬದಲಾವಣೆ ಅಗತ್ಯವಿದೆ. ಅನೇಕ ನಿವೃತ್ತ ಪತ್ರಕರ್ತರು ಇಂದು ಸಂಕಷ್ಟದಲ್ಲಿದ್ದು, ನಿಯಮಾವಳಿಗಳನ್ನು ತಿದ್ದುಪಡಿ ಮಾಡಿ ಮುಂದಿನ ತಲೆಮಾರಿನ ಪತ್ರಕರ್ತರು ಸೌಲಭ್ಯ ಪಡೆಯುವಂತಾಗಬೇಕು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟಿ ಹೇಳಿದರು.
ಪತ್ರಿಕಾ ಭವನದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘ ಘಟಕದ ನೂತನ ಪದಗ್ರಹಣ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಂಚಣಿ ವಿತರಣೆಯಲ್ಲಿಯೂ ವಾರ್ತಾ ಇಲಾಖೆಯ ಅಧಿಕಾರಿಗಳಿಂದ ಸಕಾರಾತ್ಮಕ ಬದಲಾವಣೆ ಆಗಬೇಕು ಎಂದು ಅವರು ಆಗ್ರಹಿಸಿದರು.
ಮತ್ತೋರ್ವ ಆಯುಕ್ತ ರಾಜಶೇಖರ್ ಮಾತನಾಡಿ, ಪತ್ರಕರ್ತರು ವೃತ್ತಿ ಧರ್ಮದ ಜೊತೆಗೆ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಬೈಲಾದಂತೆ ಪತ್ರಕರ್ತರಿಗೆ ಪ್ರಮಾಣವಚನ ಓದಿಸಲಾಗಿದ್ದು, ಎಲ್ಲರೂ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದರು.
ಅಧಿಕಾರದಿಂದ ನಿರ್ಗಮಿಸುವವರು ಸಂಘದ ಮುಂದಿನ ಬೆಳವಣಿಗೆಗೆ ಸಹಕರಿಸಬೇಕು. ಸಂಘದಲ್ಲಿ ಹಣದ ಕೊರತೆ ಇದ್ದರೂ ಸಂಘ ಗಟ್ಟಿಯಾಗಿದ್ದು, ಇರುವ ವ್ಯವಸ್ಥೆಯೊಳಗೆ ಸಕ್ರಿಯವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದೆ. ಅಶಕ್ತರಿಗೆ ಸಂಘ ಸಹಾಯವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮದನಗೌಡ ಮಾತನಾಡಿ, ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 94 ವರ್ಷಗಳು ಪೂರ್ಣಗೊಂಡಿದ್ದು, 100 ವರ್ಷದ ಮೈಲಿಗಲ್ಲಿನ ಹಂತಕ್ಕೆ ತಲುಪುವತ್ತ ಸಾಗುತ್ತಿದೆ ಎಂದರು. ರಾಜ್ಯದ ಪತ್ರಕರ್ತರಿಗೆ ಆರೋಗ್ಯ ವಿಮೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ಸಂಘದ ಮುಖಂಡರು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದು, ನೂತನ ತಂಡಕ್ಕೆ ಶುಭಾಶಯ ಕೋರಿದರು.
