ಚಿಕ್ಕಮಗಳೂರು: ಕಾಂಗ್ರೆಸ್ ಗ್ರಾಮ ಪಂಚಾಯತ್ ಸದಸ್ಯನನ್ನು ಯುವಕರ ಗುಂಪೊಂದು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಖರಾಯ ಪಟ್ಟಣ ಬಳಿ ಶುಕ್ರವಾರ ರಾತ್ರಿ ನಡೆದಿದೆ.
2 ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಕಾಂಗ್ರೆಸ್ ಗ್ರಾಮ ಪಂಚಾಯತ್ ಸದಸ್ಯ ಗಣೇಶ್ (38) ಹತ್ಯೆಯಾಗಿದ್ದಾರೆ. ಮೃತ ಗಣೇಶ್ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉಳಿದ ಆರೋಪಿಗಳ ಪತ್ತೆಗೆ ನಾಲ್ಕು ಪೊಲೀಸ್ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಹತ್ಯೆಗೊಂಡ ಗಣೇಶ್ ಮೃತದೇಹದ ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಶುಕ್ರವಾರ ರಾತ್ರಿ 10.30ರ ವೇಳೆಗೆ ಸಖರಾಯಪಟ್ಟಣದ ಬಾರ್ ಬಳಿ 2 ಗುಂಪುಗಳ ಮಧ್ಯೆ ಗಲಾಟೆ ನಡೆದು ಅರ್ಧ ಗಂಟೆ ಬಳಿಕ ಕಲ್ಮುರುಡೇಶ್ವರ ಮಠದ ಬಳಿ ಗಣೇಶ್ನ ಹತ್ಯೆ ನಡೆದಿದೆ. ಘಟನೆಯಲ್ಲಿ ಎದುರಾಳಿ ಗುಂಪಿನ ಸಂಜಯ್, ನಿತಿನ್ ಇಬ್ಬರ ತಲೆಗೂ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯ ಜೈಲ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಬ್ಬರು ಪೊಲೀಸರ ವಶದಲ್ಲಿ ಇದ್ದಾರೆ.
ಗಣೇಶ್ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಮೃತನ ಕುಟುಂಬ ದೂರು ದಾಖಲಿಸದ ಹಿನ್ನೆಲೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲು ಮಾಡಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಕೊಲೆಯಿಂದ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದು, ಮುನ್ನೆಚ್ಚರಿಕೆಯಾಗಿ ಸಖರಾಯಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೆಎಸ್ಆರ್ಪಿ ತುಕಡಿಯೂ ನಿಯೋಜನೆಗೊಂಡಿದೆ.
