ಶಿವಮೊಗ್ಗ: ಸಮಯಪ್ರಜ್ಞೆ ಮತ್ತು ಧೈರ್ಯ ಮೆರೆದಿದ್ದಕ್ಕಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾದಿಬೀಸು ಹೋಬಳಿ ಕಲ್ಕೆರೆ ಗ್ರಾಮದ ಬಾಲಕ ಮಧು ಎಂ.ಆರ್. ಅವರನ್ನು 2025-26ರ ಸಾಲಿನ ಶೌರ್ಯ ಪ್ರಶಸ್ತಿಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.
ಮಧು ಅವರು ಕಳೆದ ವರ್ಷ ಎಡೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ಶಾಲೆಗೆ ರಜಾ ಇದ್ದ ಕಾರಣ ಅವರು ಮನೆಯಲ್ಲೇ ಇದ್ದರು. ಇದೇ ವೇಳೆ ಮನೆಯ ಎದುರಿನ ಗದ್ದೆಯಲ್ಲಿ ಶಿಕಾರಿಪುರ ತಾಲೂಕಿನ ಬನ್ನೂರು ಗ್ರಾಮದ ಮದನ್ ಅವರು ಭತ್ತದ ಹುಲ್ಲು ಪಿಂಡಿ ಕಟ್ಟುವ ಯಂತ್ರವನ್ನು ಚಾಲನೆ ಮಾಡುತ್ತಾ ಕಾರ್ಯ ನಿರ್ವಹಿಸುತ್ತಿದ್ದರು.
ಕೆಲಸದ ವೇಳೆಯಲ್ಲಿ ಮದನ್ ಅವರ ಕೈ ಆಕಸ್ಮಿಕವಾಗಿ ಯಂತ್ರದಲ್ಲಿ ಸಿಲುಕಿಕೊಂಡು, ನೋವಿನಿಂದ ಜೋರಾಗಿ ಸಹಾಯಕ್ಕಾಗಿ ಕೂಗಾಡಲಾರಂಭಿಸಿದರು. ಆ ಕ್ಷಣದಲ್ಲಿ ಮಧು ತಕ್ಷಣ ಸ್ಥಳಕ್ಕೆ ಧಾವಿಸಿ ಟ್ರ್ಯಾಕ್ಟರ್‌ನ ಎಂಜಿನ್ ಆಫ್ ಮಾಡಿ, ಯಂತ್ರದ ಸದ್ದು ನಿಲ್ಲಿಸಿದ ನಂತರ, ಯಂತ್ರದೊಳಗೆ ಸಿಲುಕಿದ್ದ ಕೈಯನ್ನು ಹೊರತೆಗೆದು ಮದನ್ ಅವರ ಪ್ರಾಣವನ್ನು ರಕ್ಷಿಸಿದರು.
ಮಧುವಿನ ಸಮಯಪ್ರಜ್ಞೆ, ಧೈರ್ಯ ಮತ್ತು ಮಾನವೀಯತೆಯನ್ನು ಗುರುತಿಸಿದ ರಾಜ್ಯ ಸರ್ಕಾರ, ಈ ಸಾಹಸಕ್ಕೆ ಗೌರವ ಸೂಚವಾಗಿ 2025-26ರ ಶೌರ್ಯ ಪ್ರಶಸ್ತಿಯನ್ನು ಘೋಷಿಸಿದೆ.
ಬಾಲಕ ಮಧು ಅವರು ರಾಮಚಂದ್ರ ಮತ್ತು ಸುಶೀಲಾ ದಂಪತಿಯ ಪುತ್ರರಾಗಿದ್ದು, ಪ್ರಸ್ತುತ ಸೊರಬ ತಾಲೂಕಿನ ನಿಸರಾಣಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಮಧುವಿನ ಸಾಧನೆಯನ್ನು ಬಹುಮಾನಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣ್ ಪ್ರಸಾದ್ ಅವರು ತಮ್ಮ ಮನೆಯಲ್ಲಿ ಅವರನ್ನು ಸನ್ಮಾನಿಸಿದ್ದಾರೆ.
ಈ ಶೌರ್ಯ ಪ್ರಶಸ್ತಿಯನ್ನು ಬೆಂಗಳೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಪ್ರದಾನ ಮಾಡಲಾಗುತ್ತದೆ.
