ಬೆಂಗಳೂರು: 4 ವರ್ಷಗಳ ಹಿಂದೆ ತುಂಗಾ ನದಿ ದಂಡೆ ಮೇಲೆ ಪ್ರಾಯೋಗಿಕ ಸ್ಫೋಟ ಮತ್ತು ಸ್ವಾತಂತ್ರ್ಯ ದಿನಾಚರಣೆ ದಿನ ಹಿಂದೂ ಯುವಕನಿಗೆ ಚಾಕು ಇರಿದು ಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ ಇಬ್ಬರು ಐಸಿಸ್ ಉಗ್ರ ಸಂಘಟನೆ ಸದಸ್ಯರಿಗೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಕೋರ್ಟ್ 6 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಶಿವಮೊಗ್ಗ ಮೂಲದ ಅಪರಾಧಿಗಳಾದ ಜಬಿವುಲ್ಲಾ ಹಾಗೂ ನದೀಂ ಫೈಜಲ್ ಶಿಕ್ಷೆಗೊಳಗಾದವರು. ಹಿಂದೂ ಸಮಾಜದ ಯುವಕರನ್ನು ಗುರಿಯಾಗಿಸಿ ಅವರ ವಾಹನಗಳಿಗೆ ಹಾಗೂ ಅಂಗಡಿಗಳಿಗೆ ಬೆಂಕಿಯಿಟ್ಟು ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಜತೆಗೆ 2022ರ ಆ.15ರಂದು ರಾಜಸ್ಥಾನ ಮೂಲದ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ ವಿವಿಧ ಸೆಕ್ಷನ್ಗಳ ಅಡಿ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 59,000 ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ ಅವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
2022ರಲ್ಲಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರೇಮ್ಸಿಂಗ್ ಕೊಲೆಯತ್ನ ಪ್ರಕರಣದಲ್ಲಿ ಜಬಿವುಲ್ಲಾ ಹಾಗೂ ನದೀಂ ಫೈಜಲ್ ಕ್ರಮವಾಗಿ 8 ಹಾಗೂ 9ನೇ ಆರೋಪಿಗಳಾಗಿದ್ಧಾರೆ. ಇನ್ನು ತುಂಗಾ ನದಿ ದಂಡೆ ಮೇಲೆ ಪ್ರಾಯೋಗಿಕ ಸ್ಫೋಟ, ಭಾರತದ ಧ್ವಜ ಸುಟ್ಟ ಪ್ರಕರಣ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಎರಡು ಪ್ರಕರಣಗಳನ್ನು ಎನ್ಐಎ ತನಿಖೆ ನಡೆಸಿತ್ತು. ಬಳಿಕ ತನಿಖೆ ವೇಳೆ ಪ್ರಕರಣದ ಮೊದಲ ಆರೋಪಿಯಾಗಿರುವ ಮಂಗಳೂರು ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗ ತುಂಗಾನದಿ ದಂಡೆಯ ಬಳಿಯ ಪ್ರಾಯೋಗಿಕ ಸ್ಫೋಟ ಪ್ರಕರಣದ ರೂವಾರಿ ಮೊಹಮ್ಮದ್ ಶಾರೀಕ್ ಮತ್ತು ಆತನ ಸಹಚರ ಮಾಜ್ ಮುನೀರ್ನ ಸೂಚನೆ ಮೇರೆಗೆ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಎನ್ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಸ್ಫೋಟಕ ವಿಚಾರ ಬೆಳಕಿಗೆ ಬಂದಿತ್ತು.
ಈ ಇಬ್ಬರು ಅಪರಾಧಿಗಳು ಐಸಿಸ್ ಸಂಘಟನೆಯ ಸದಸ್ಯರಾಗಿದ್ದಾರೆ. ಅಲ್ಲದೆ, ಸೋಷಿಯಲ್ ಡ್ರೆಮಾಕ್ರಟಿಕ್ ಪಾರ್ಟಿ (ಎಸ್ ಡಿಪಿಐ) ಹಾಗೂ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ, ಪ್ರಕರಣದ ಕಿಂಗ್ ಪಿನ್ ಮೊಹಮ್ಮದ್ ಶಾರೀಕ್ ಸೂಚನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದರು.
ಹಿಂದೂ ಸಮುದಾಯದ ವ್ಯಕ್ತಿಗಳ ವಾಹನಗಳಿಗೆ ಹಾಗೂ ಅಂಗಡಿಗಳಿಗೆ ಬೆಂಕಿಯಿಟ್ಟು ಹಾನಿ ಮಾಡುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ಮಾಡಲು ಸಂಚು ರೂಪಿಸುತ್ತಿದ್ದರು. ಇದೇ ಉದ್ದೇಶದಿಂದಲೇ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ಪ್ರೇಮ್ ಸಿಂಗ್ ಮೇಲೆ ಆರೋಪಿಗಳು ಗುಂಪು ದಾಳಿ ನಡೆಸಿ ಚಾಕುವಿನಿಂದ ಇರಿದಿತ್ತು ಎಂದು ಎನ್ಐಎ ತಿಳಿಸಿದೆ.
ವಿಚಾರಣೆ ವೇಳೆ ಅಪರಾಧಿಗಳು ಬಳಸುತ್ತಿದ್ದ ಮೊಬೈಲ್ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಐಸಿಸ್, ಪಿಎಫ್ಐ ಹಾಗೂ ಎಸ್ಡಿಪಿಐ ನಾಯಕರ ಪ್ರಚೋದನಾಕಾರಿ ಭಾಷಣ ಹಾಗೂ ಜಿಹಾದಿ ಬಗ್ಗೆ ಬೋಧನೆಗಳ ವಿಡಿಯೋ ಹಾಗೂ ಆಡಿಯೋ ತುಣುಕುಗಳು ಪತ್ತೆಯಾಗಿದ್ದವು.
ಬೆಂಕಿ ಹಚ್ಚಿ ಹಾನಿ ಮಾಡುವ ಉದ್ದೇಶಕ್ಕಾಗಿ ಶಿವಮೊಗ್ಗದ ಆರ್ಎಂಎಲ್ ನಗರದ ಕೆಲ ಬಟ್ಟೆ ಅಂಗಡಿಗಳು ಹಾಗೂ ಗೋದಾಮುಗಳ ಪೋಟೋಗಳನ್ನು ಶಾರೀಕ್ ಹಾಗೂ ಪ್ರಕರಣದ 3ನೇ ಆರೋಪಿ ಸೈಯ್ಯದ್ ಯಾಸೀನ್ ಕಳುಹಿಸಿದ್ದ ಪೋಟೋಗಳು ಲಭ್ಯವಾಗಿತ್ತು. ಜತೆಗೆ ಫರಾತುುಲ್ಲಾ ಘೌರಿ ಅವರ ಘಜ್ವಾ-ಎ-ಹಿಂದ್ ನ ವಿಡಿಯೋ ಪತ್ತೆಯಾಗಿದೆ ಎಂದು ಎನ್ಐಎ ತಿಳಿಸಿದೆ.
ಉಗ್ರ ಕೃತ್ಯಕ್ಕೆ ಸಂಚು ಹಾಗೂ ಕೊಲೆ ಯತ್ನದಲ್ಲಿ ಭಾಗಿಯಾಗಿರುವ ಬಗ್ಗೆ ಇಬ್ಬರು ಅಪರಾಧಿಗಳು ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರಿಂದ ಅವರಿಗೆ 6 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆಯನ್ನು ಕೋರ್ಟ್ ನೀಡಿದೆ. ಈ ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳು ಭಾಗಿಯಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಎನ್ಐಎ ಪರ ವಕೀಲರಾದ ಪಿ. ಪ್ರಸನ್ನ ಕುಮಾರ್ ಮಾಹಿತಿ ನೀಡಿದರು. ಮತ್ತೊಬ್ಬ ಹಿರಿಯ ವಕೀಲ ಸಿ.ಸಚಿನ್ ಅವರು ಎನ್ಐಎ ಪರ ವಾದ ಮಂಡಿಸಿದ್ದರು.
