ಹುಬ್ಬಳ್ಳಿ,: ಸೌದಿ ಅರೇಬಿಯಾದಲ್ಲಿ ಡೀಸೆಲ್ ಟ್ಯಾಂಕರ್ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 42 ಭಾರತೀಯರು ಸಜೀವ ದಹನವಾಗಿದ್ದಾರೆ. ಇದೇ ದುರಂತದಲ್ಲಿ ಕರ್ನಾಟಕದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿ ನಗರದ ಗಣೇಶ ಪೇಟ್ ನಿವಾಸಿ ಅಬ್ದುಲ್ ಘಣಿ(55) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಅಬುಧಾಬಿ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ದುಬೈಗೆ ಹೋಗಿದ್ದರು.
ಇತ್ತ ಹುಬ್ಬಳ್ಳಿಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಕುಟುಂಬದ ಓರ್ವರನ್ನು ಕಳುಹಿಸಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ವಕ್ಫ್ ಸಚಿವರು ಮತ್ತು ಜಿಲ್ಲಾಡಳಿತಕ್ಕೆ ಕುಟುಂಬ ಮನವಿ ಮಾಡಿದೆ.
ನಡೆದದ್ದೇನು?
ಮೆಕ್ಕಾದಿಂದ ಮದೀನಾಗೆ ಹೋಗುತ್ತಿದ್ದ ಸಂದರ್ಭದಲ್ಲಿ ಡೀಸೆಲ್ ಟ್ಯಾಂಕರ್ಗೆ ಬಸ್ ಡಿಕ್ಕಿಯಾಗಿ 42 ಜನ ಸಜೀವ ದಹನವಾಗಿದ್ದಾರೆ. ಸೌದಿ ಅರೇಬಿಯಾದ ಮುಫರಿಹತ್ ಬಳಿ ದುರಂತ ಸಂಭವಿಸಿದೆ. ಈ ದುರಂತದಲ್ಲಿ 20 ಮಹಿಳೆಯರು, 11 ಮಕ್ಕಳು ಸೇರಿದಂತೆ 42 ಮಂದಿ ಸಾವನ್ನಪ್ಪಿದ್ದು, ಬಸ್ನಲ್ಲಿದ್ದ ಮೊಹಮ್ಮದ್ ಶೋಯಬ್ ಎಂಬಾತ ಮಾತ್ರ ಬದುಕುಳಿದಿದ್ದಾರೆ.
