Trending

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅ.31ರ ವರೆಗೆ ವಿಸ್ತರಣೆ : ಇನ್ಮುಂದೆ ಶಿಕ್ಷಕರ ಬದಲು ಇವರಿಂದ ಸಮೀಕ್ಷೆ ಕಾರ್ಯ!

Spread the love

ಬೆಂಗಳೂರು: ನಿರೀಕ್ಷೆಯಂತೆ ಪೂರ್ಣವಾಗದ ಕಾರಣ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಅ.31ರವರೆಗೆ ವಿಸ್ತರಿಸಲು ಮತ್ತು ಶಿಕ್ಷಕರನ್ನು ಬಿಟ್ಟು ಇತರ ಇಲಾಖೆಯ ಸಿಬ್ಬಂದಿಯನ್ನು ಸಮೀಕ್ಷೆಗೆ ಬಳಸಿಕೊಳ್ಳಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಯಿತು.

ಬಹುತೇಕ ಜಿಲ್ಲೆಗಳಲ್ಲಿ ಶೇ.95-98ರಷ್ಟು ಸಮೀಕ್ಷೆ ಉತ್ತಮ ಪ್ರಗತಿ ಕಂಡಿದೆ. ಆದರೆ, ರಾಮನಗರ, ಬೀದರ್, ಧಾರವಾಡ ಮೂರು ಜಿಲ್ಲೆಗಳಲ್ಲಿ ಶೇ.86-89ಕ್ಕಿಂತ ಕಡಿಮೆ ಪ್ರಗತಿ ಕಂಡಿದೆ.‌ ಬೆಂಗಳೂರಲ್ಲಿ ಅತೀ ಕಡಿಮೆ ಪ್ರಗತಿ ಕಂಡಿರುವ ಬಗ್ಗೆ ಚರ್ಚೆ ನಡೆಸಲಾಯಿತು.

ದೀಪಾವಳಿ ಹಬ್ಬದ ಪ್ರಯುಕ್ತ ಬುಧವಾರದ ತನಕ ರಜೆ ಇದ್ದು, ಅ.23ರಿಂದ ಅ.31ರ ವರೆಗೆ ಸಮೀಕ್ಷೆ ನಡೆಸಿ ಪೂರ್ಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮುಂದಿನ ಸಮೀಕ್ಷೆಯಿಂದ ಶಿಕ್ಷಕರು ಮುಕ್ತ: ಶಾಲೆ ಆರಂಭವಾಗುವುದರಿಂದ ಮುಂದಿನ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗವಹಿಸುವುದಿಲ್ಲ. ಅ.23ರಿಂದ ಅ.31ರ ವರೆಗೆ ನಡೆಯುವ ಸಮೀಕ್ಷಾ ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.‌ ಶಿಕ್ಷಕರ ಬದಲಿಗೆ ಇತರ ಇಲಾಖೆಗಳ ಸಿಬ್ಬಂದಿಯನ್ನು ಸಮೀಕ್ಷೆ ಕಾರ್ಯದಲ್ಲಿ ಬಳಸುವಂತೆ ಸಿಎಂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಅ.23ರಿಂದ ಪುನಾರಂಭವಾಗುವ ಜಾತಿ ಸಮೀಕ್ಷೆಯಲ್ಲಿ ಶಿಕ್ಷಕರು ಪಾಲ್ಗೊಳ್ಳುವುದಿಲ್ಲ.

ಅ.31ಕ್ಕೆ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ: ಸಭೆಯ ಬಳಿಕ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕನಿಷ್ಠ ಶೇ.95ರಷ್ಟು ಸಮೀಕ್ಷೆ ಆಗಿದೆ. ಆದರೆ, ರಾಮನಗರ, ಬೀದರ್ ಮತ್ತು ಧಾರವಾಡದಲ್ಲಿ ಅಂದಾಜು ಶೇ.86-89 ಸಮೀಕ್ಷೆ ಪ್ರಗತಿ ಕಂಡಿದೆ. ಬೆಂಗಳೂರಿನಲ್ಲಿ ಬಹಳ ಕಡಿಕೆ ಸಮೀಕ್ಷೆ ನಡೆದಿದೆ. ಸುಮಾರು ಶೇ.45ರಷ್ಟು ಮಾತ್ರ ಪ್ರಗತಿ ಕಂಡಿದೆ ಎಂದರು.

ಅ.19ರ ವರೆಗೆ ನಡೆದ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗವಹಿಸಿದ್ದರು. ಇನ್ನು ಮುಂದೆ ರಾಜ್ಯಾದ್ಯಂತ ಶಿಕ್ಷಕರು ಭಾಗವಹಿಸುವುದಿಲ್ಲ. ಶಿಕ್ಷಕರನ್ನು ಹೊರತುಪಡಿಸಿ ಬೇರೆ ಇಲಾಖೆಗಳಲ್ಲಿನ ಸಿಬ್ಬಂದಿಯಿಂದ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅ.31ರವರೆಗೆ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲೂ ಅ.31ರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಮೂರು ದಿನ ದೀಪಾವಳಿ ರಜೆ ಬಳಿಕ ಅ.23ರಿಂದ ಅ.31ರ ವರೆಗೆ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.‌ ಶಿಕ್ಷಕರನ್ನು ಹೊರತುಪಡಿಸಿ ಎಲ್ಲ ಸಿಬ್ಬಂದಿಯನ್ನು ಸಮೀಕ್ಷೆಗೆ ಬಳಸುತ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಶೇ.100ರಷ್ಟು ಸಮೀಕ್ಷೆ ಪೂರ್ಣವಾಗುವ ವಿಶ್ವಾಸ ಇದೆ. ಸಮೀಕ್ಷೆ ಸಂಬಂಧ ಎಲ್ಲ ಶಾಸಕರಿಗೂ ಮನವಿ ಮಾಡಲು ತಿಳಿಸಲಾಗಿದೆ. ಬೆಂಗಳೂರು ಶಾಸಕರಿಗೂ ಈ ಸಂಬಂಧ ಸಿಎಂ ಸೂಚನೆ ನೀಡಲಿದ್ದಾರೆ. ಬೆಂಗಳೂರಲ್ಲಿ ಸಮೀಕ್ಷೆ ತಡವಾಗಿ ಆರಂಭವಾಯಿತು. ಹಾಗಾಗಿ ವಿಳಂಬವಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.

ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಶಿವರಾಜ ತಂಗಡಗಿ, ರಾಮಲಿಂಗಾ ರೆಡ್ಡಿ, ಭೈರತಿ ಸುರೇಶ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್.ನಾಯಕ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

[pj-news-ticker]