Trending

ಶಿವಮೊಗ್ಗ : ಗಣತಿ ಟಾರ್ಗೆಟ್ ಮುಗಿಸಿದ ಶಿಕ್ಷಕರಿಗೆ ಸನ್ಮಾನಿಸಿದ ಡಿಸಿ ಗುರುದತ್ತ ಹೆಗಡೆ

Spread the love

ಶಿವಮೊಗ್ಗ: ಜಿಲ್ಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಗಣತಿಯಲ್ಲಿ ಭಾಗಿಯಾಗಿ ನಿಗದಿತ ಅವಧಿಗಿಂತ ಮುಂಚೆಯೇ ಸಮೀಕ್ಷೆ ಕಾರ್ಯ ಮುಗಿಸಿದ ಶಿವಮೊಗ್ಗ ತಾಲೂಕಿನ ಐವರು ಶಿಕ್ಷಕರಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹಾರ, ಶಾಲು ಹಾಕಿ ಸನ್ಮಾನ ಮಾಡಿ ಪ್ರೋತ್ಸಾಹ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ‌ ಕಚೇರಿಯಲ್ಲಿ ಮಾತನಾಡಿದ ಅವರು, ‘ಶಿವಮೊಗ್ಗ ಜಿಲ್ಲೆಯಲ್ಲಿ 1.70 ಲಕ್ಷ ಮನೆಗಳ ಗಣತಿ ನಡೆಸಲಾಗಿದೆ.‌ ಜಿಲ್ಲೆಯಲ್ಲಿ 4.90 ಲಕ್ಷ ಮನೆಗಳಿವೆ. ಈಗ ಶೇ. 35 ರಷ್ಟು ಗಣತಿ ನಡೆಸಲಾಗಿದೆ.‌ ಈಗ ಆ್ಯಪ್ ಸಹ ಸರಿಯಾಗಿ ಕೆಲಸ ಮಾಡುತ್ತಿದೆ.‌ ನಮ್ಮ ಜಿಲ್ಲೆಯಲ್ಲಿ ನಿತ್ಯ 50 ಸಾವಿರ ಗಣತಿ ನಡೆಯುತ್ತಿದೆ. ಜಿಲ್ಲೆಯಲ್ಲಿ 4,500 ಗಣತಿದಾರರು ಕೆಲಸದಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯ ಸೊರಬ ಹಾಗೂ ಶಿಕಾರಿಪುರದಲ್ಲಿ ಚೆನ್ನಾಗಿ ಗಣತಿ ಕಾರ್ಯ ಪ್ರಗತಿಯಲ್ಲಿದೆ. ಕೆಲ ಗಣತಿದಾರರು ತಮಗೆ ನೀಡಿದ ಗುರಿಯನ್ನು ಮುಗಿಸಿದ್ದಾರೆ.‌ ಗಣತಿ ಮುಗಿಸಲು ಅಕ್ಟೋಬರ್ 7ರ ತನಕ ಅವಕಾಶ ಇದ್ದರೂ ಸಹ ಅಕ್ಟೋಬರ್ ಬರುವುದರ ಒಳಗೆಯೇ ತಮ್ಮ ಗಣತಿಯನ್ನು ಮುಗಿಸಿದ್ದಾರೆ. ಇಂತಹವರಿಗೆ ಸನ್ಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡುತ್ತಿದ್ದೇವೆ. ಅಕ್ಟೋಬರ್ 7ರ ಒಳಗೆ ನಮಗೆ ನೀಡಿರುವ ಟಾರ್ಗೆಟ್​ ಮುಗಿಸುತ್ತೇವೆ’ ಎಂದರು.‌

‘ಗಣತಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರನ್ನು ನೇಮಿಸಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಗಣತಿದಾರರ ಕೊರತೆ ಇರುವುದರಿಂದ 400 ಜನ ಪ್ರೌಢ ಶಾಲಾ ಶಿಕ್ಷಕರನ್ನೂ ನೇಮಿಸಿಕೊಳ್ಳಲಾಗಿದೆ. 100 ಅಂಗನವಾಡಿ ಕಾರ್ಯಕರ್ತರನ್ನು ತೆಗೆದುಕೊಂಡಿದ್ದೇವೆ. ಹಾಸ್ಟೆಲ್ ವಾರ್ಡನ್​​ಗಳನ್ನು ತೆಗೆದುಕೊಂಡಿದ್ದೇವೆ. ಶಿಕ್ಷಣ ಇಲಾಖೆಯ ಕೆಲವರನ್ನು ಈ ಕೆಲಸಕ್ಕೆ ನಿಯೋಜಿಸಿದ್ದೇವೆ. ಅನುದಾನಿತ ಶಿಕ್ಷಕರನ್ನೂ ಕೆಲಸಕ್ಕೆ ಹಚ್ಚಿದ್ದೇವೆ.

ಜಿಲ್ಲೆಯಲ್ಲಿ 15 ಜನ ಶಿಕ್ಷಕರು ತಮ್ಮ ಗಣತಿಯನ್ನು ಮುಗಿಸಿರುವ ಮಾಹಿತಿ ಬಂದಿದೆ. ಶಿವಮೊಗ್ಗ ಸಿಟಿಯಲ್ಲಿ ಗಣತಿದಾರರ ಕೊರತೆ ಇದ್ದ ಕಾರಣಕ್ಕೆ ಗಣತಿ ಕಾರ್ಯ ನಿಧಾನವಾಗಿತ್ತು. ಈಗ ಗಣತಿ ವೇಗವಾಗಿ ನಡೆಯುತ್ತಿದೆ. ಆ್ಯಪ್​​ನಲ್ಲಿದ್ದ ನ್ಯೂನತೆಯನ್ನು ಸರಿಪಡಿಸಲಾಗಿದೆ. ಇದರಿಂದಲೇ ಒಂದು ದಿನಕ್ಕೆ 50 ಸಾವಿರ ಗಣತಿ ಮುಗಿದಿದೆ’ ಎಂದಿದ್ದಾರೆ.

ಯಾರಿಗೂ ಸಹ ಬಲವಂತವಾಗಿ ಗಣತಿಯಲ್ಲಿ ಭಾಗವಹಿಸಿ ಎಂದು ಹೇಳುತ್ತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಇದುವರೆಗೂ ಇಬ್ಬರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

[pj-news-ticker]