ಕಾನಾಹೊಸಹಳ್ಳಿ (ವಿಜಯನಗರ): ರಾಜ್ಯ ಸರಕಾರ ನೀಡುವ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2 ಸಾವಿರ ರೂ. ಒಟ್ಟುಗೂಡಿಸಿದ ಪಾರ್ವತಮ್ಮ ದಂಪತಿಯು ತಮ್ಮ ಮನೆಗೆ 28 ಸಾವಿರ ರೂ. ವೆಚ್ಚದ ಬಾಗಿಲು ಮಾಡಿಸಿದ್ದು, ಆ ಬಾಗಿಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಮತ್ತು ಫೋಟೋ ಕೆತ್ತಿಸಿ ಅಭಿಮಾನ ಮೆರೆದಿದ್ದಾರೆ.
ಕಾನಾಹೊಸಹಳ್ಳಿ ಸಮೀಪದ ಗಡಿಗ್ರಾಮ ಕೆಂಚಮಲ್ಲನಹಳ್ಳಿ ಗ್ರಾಮದ ಬಡಕುಟುಂಬದ ಅಂಗಡಿ ಕೆ.ಎಂ.ತಿಪ್ಪೇಸ್ವಾಮಿ ಮತ್ತು ಪಾರ್ವತಮ್ಮ ದಂಪತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿಯನ್ನು ತಮ್ಮ ಮನೆಯ ಮುಖ್ಯ ಬಾಗಿಲ ಮೇಲೆ ಹೆಸರು ಮತ್ತು ಭಾವಚಿತ್ರವನ್ನು ಕೆತ್ತಿಸಿ ಅಭಿಮಾನ ಮೆರೆದಿದ್ದಾರೆ.
ಪಾರ್ವತಮ್ಮ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದು, ಯೋಜನೆ ಆರಂಭದಿಂದಲೂ ಈವರೆಗೆ ಒಟ್ಟು 15 ತಿಂಗಳಿಂದ ಬ್ಯಾಂಕ್ ಖಾತೆಗೆ ಜಮೆಯಾಗಿದ್ದ ಹಣವನ್ನು ಬಿಡಿಸಿಕೊಂಡು ಖರ್ಚು ಮಾಡದೇ ಕೂಡಿಟ್ಟಿದ್ದಾರೆ. ಕಳೆದ 10 ವರ್ಷಗಳ ಹಿಂದೆ ನಿರ್ಮಿಸಿದ್ದ ಮನೆಯ ಬಾಗಿಲು ಸರಿ ಇಲ್ಲದ್ದರಿಂದ ಗೃಹಲಕ್ಷ್ಮಿ ಹಣದಲ್ಲಿ ಹೊಸ ಬಾಗಿಲು ಮಾಡಿಸುವ ಯೋಚನೆ ಮಾಡಿದ್ದಾರೆ.
ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರು ಬಡವರು, ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆಂಬ ಅಭಿಮಾನದಿಂದ 35ಸಾವಿರ ರೂ. ಖರ್ಚು ಮಾಡಿ ಸ್ಥಳೀಯ ಕುಶಲಕರ್ಮಿ ದುರುಗೇಶ್ ಅವರ ಮೂಲಕ ಹೊಸ ಬಾಗಿಲ ಮೇಲೆ ‘ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೆಸರು ಮೇಲ್ಭಾಗದಲ್ಲಿ ಕೆತ್ತಿಸಿದ್ದರೆ, ಮಧ್ಯದಲ್ಲಿ ಸಿದ್ದರಾಮಯ್ಯ ಅವರು ನಿಂತಿರುವ ಭಾವಚಿತ್ರವನ್ನು ಹಾಗೂ ಕೆಳಭಾಗದಲ್ಲಿ ಗೃಹಲಕ್ಷ್ಮಿ ಯೋಜನೆ’ ಎಂದು ಕೆತ್ತಿಸಿ ಅಭಿಮಾನ ಮೆರೆದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸಿದ್ದರಾಮಯ್ಯ ಅಂದ್ರೆ ನಮಗೆ ಪ್ರಾಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದ್ರೆ ನಮಗೆ ಪ್ರಾಣ. ಅವರು ರಾಜ್ಯದ ಬಡವರು, ಹಿಂದುಳಿದವರು, ಮಹಿಳೆಯರು ಸೇರಿ ಎಲ್ಲರಿಗೂ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿ ನಮ್ಮಂಥ ಬಡವರ ಉದ್ಧಾರಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ. ಅಂಥ ಪುಣ್ಯಾತ್ಮನ ಫೋಟೋವನ್ನು ಬೆಳಗ್ಗೆ ಎದ್ದ ತಕ್ಷಣವೇ ನೋಡಬೇಕೆಂಬ ಆಸೆ. ಹೀಗಾಗಿ, ಅವರ ಮೇಲಿನ ಅಭಿಮಾನಕ್ಕೆ ಗೃಹಲಕ್ಷ್ಮಿ ಹಣದಲ್ಲೇ ಹೊಸಬಾಗಿಲು ಮಾಡಿಸಿ ಅದರಲ್ಲಿ ಅವರ ಹೆಸರು ಮತ್ತು ಫೋಟೋ ಹಾಕಿಸಲಾಯಿತು ಎನ್ನುತ್ತಾರೆ ಕೆಂಚಮಲ್ಲನಹಳ್ಳಿಯ ಪಾರ್ವತಮ್ಮ ಮತ್ತು ಅವರ ಪತಿ ಕೆ.ಎಂ.ತಿಪ್ಪೇಸ್ವಾಮಿ.
