Trending

‘ಸ್ಪೂರ್ತಿ’ಗೆ ಬೆಳ್ಳಿಯ ಸಂಭ್ರಮ

Spread the love
ಸಾಮಾಜಿಕ ಬದಲಾವಣೆಯ ಆಶಯಗಳನ್ನು ಇಟ್ಟುಕೊಂಡು ಸಮಾಜದಲ್ಲಿ ಹುಟ್ಟಿಕೊಳ್ಳುವ ಅದೆಷ್ಟೋ ಸಂಘ ಸಂಸ್ಥೆಗಳು ಮೂರ್ನಾಲ್ಕು ವರ್ಷ ಕಳೆಯುವುದರೊಳಗಾಗಿ ಹತ್ತಾರು ಸಮಸ್ಯೆಗಳ ಸುಳಿಗೆ ಸಿಲುಕಿ, ನಲುಗಿ ಹೋಗಿರುವ ಸಂಗತಿಗಳನ್ನು ನಾವೆಲ್ಲರೂ ಗಮನಿಸಿದ್ದೇವೆ.

ಆದರೆ ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ, ದಿಟ್ಟತನದಿಂದ ಸಮಸ್ಯೆಗಳನ್ನು ಹಿಮ್ಮೆಟ್ಟಿಸಿ 25 ವರ್ಷಗಳ ಕಾಲ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಜನಮುಖಿ ಚಿಂತಕರಾಗಿರುವ ಕೆ.ಬಿ ರೂಪಾನಾಯ್ಕ ಸಮಾನ ಮನಸ್ಕರನ್ನು ಒಳಗೊಂಡ *’ಸ್ಪೂರ್ತಿ’ ಸಂಸ್ಥೆ* ಕಟ್ಟಿ, ಈ ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಕಾರಣಭೂತರಾಗಿರುವುದು ನಾಗರೀಕ ಸಮಾಜ ಹೆಮ್ಮೆ ಪಡುವ ಸಂಗತಿಯೇ ಆಗಿದೆ.

ಆಗಷ್ಟೇ ಪದವಿ ಮುಗಿಸಿ, ಜನಪರ ಹೋರಾಟಗಳಲ್ಲಿ ಪಾದಾರ್ಪಣೆ ಮಾಡಿದ್ದ ಕೆ.ಬಿ ರೂಪಾನಾಯ್ಕ ಅವರಿಗೆ ಸಮಾಜದಲ್ಲಿರುವ ಅಸಮಾನತೆ, ದಬ್ಬಾಳಿಕೆ, ದೌರ್ಜನ್ಯ, ಅಧಿಕಾರಿಗಳ ಅಸಡ್ಡೆತನ, ಕೆಲಸಕ್ಕಾಗಿ ಬರುವ ಬಡವರ ಅಲೆದಾಟ ಹೀಗೆ ವಿರೂಪಗೊಂಡಿರುವ ಈ ಸಮಾಜವನ್ನು ತನ್ನ ಕೈಲಾದ ಮಟ್ಟಿಗೆ ಸರಿಪಡಿಸುವ ಉದ್ದೇಶದೊಂದಿಗೆ ಆಗಸ್ಟ್ 2000ರಲ್ಲಿ ದಾವಣಗೆರೆಯಲ್ಲಿ ‘ಸ್ಪೂರ್ತಿ’ ಸಂಸ್ಥೆ ಪ್ರಾರಂಭಿಸಿ ಅಂದಿನಿಂದಲೇ ಜನಪರವಾಗಿ ಕೆಲಸ ಮಾಡುತ್ತಿದ್ದ ಅನೇಕ ಸಂಘ ಸಂಸ್ಥೆಗಳೊಂದಿಗೆ ಜೊತೆಗೂಡಿ ಹೋರಾಟವನ್ನು ರೂಪಿಸಿದ ಹೆಗ್ಗಳಿಕೆ ಅವರದು.

ಪ್ರಾರಂಭದಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಹಾಗೂ ಹೊನ್ನಾಳಿ ತಾಲೂಕುಗಳನ್ನು ಕಾರ್ಯಕ್ಷೇತ್ರವಾಗಿಸಿಕೊಂಡ ‘ಸ್ಪೂರ್ತಿ ‘ ಸಂಸ್ಥೆಯು ಆ ಭಾಗದಲ್ಲಿ ಅನೇಕ ಹೋರಾಟಗಳನ್ನು ಕೈಗೆತ್ತಿಕೊಂಡಿತು. ಎನ್ ಗಾಣದ ಕಟ್ಟೆಯಲ್ಲಿ ಸಾಮೂಹಿಕ ಭೂಮಿ ಉಳುವಿಗಾಗಿ ಸರ್ಕಾರವು ಎಂಪಿಎಂ ಗೆ ನೀಲಗಿರಿ ಬೆಳೆಯಲು ಅವಕಾಶ ನೀಡಿದ್ದನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಇತರೆ ಸಂಘ ಸಂಸ್ಥೆಗಳೊಂದಿಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಯಿತು. ನ್ಯಾಯಾಲಯವು ಜನಪರ ತೀರ್ಪು ನೀಡಿದ್ದರಿಂದ ಎಂಪಿಎಂ ಆಕ್ರಮಿತ ಜಮೀನನ್ನು ಮರಳಿ ಗ್ರಾಮಸ್ಥರಿಗೆ ಹಂಚಲಾಯಿತು.

ಹಂತ ಹಂತವಾಗಿ ಹೋರಾಟದ ಕಾವು ಹೆಚ್ಚಿಸಿಕೊಂಡ ‘ಸ್ಪೂರ್ತಿ’ ದಾವಣಗೆರೆ, ಚಿತ್ರದುರ್ಗ, ಗದಗ, ಧಾರವಾಡ, ಶಿವಮೊಗ್ಗ, ಬೆಳಗಾಂ, ಕೊಪ್ಪಳ ಜಿಲ್ಲೆಗಳು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ, ಆಹಾರದ ಹಕ್ಕಿಗಾಗಿ ಆಂದೋಲನ, ಬಗರ್ ಹುಕುಂ ಮತ್ತು ಅರಣ್ಯ ಕಾಯ್ದೆಗಾಗಿ ಭೂ ಚಳುವಳಿ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಬಾಲಕಾರ್ಮಿಕರಿಗೆ ಶಿಕ್ಷಣ, ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ, ಸಾವಯವ ಕೃಷಿ ಆಂದೋಲನ, ಗ್ರಾಮೀಣ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಅನುಷ್ಠಾನ, ಸರ್ಕಾರಿ ಆಸ್ತಿಯ ರಕ್ಷಣೆ ಹಾಗೂ ನಿರ್ವಹಣೆ, ಸ್ಥಳೀಯ ಚುನಾಯಿತ ಮಹಿಳೆಯರ ನಾಯಕತ್ವ ಬಲವರ್ಧನೆ ಸೇರಿದಂತೆ ಅನೇಕ ಜನಜಾಗೃತಿ ಅಭಿಯಾನಗಳನ್ನು ಕೈಗೊಳ್ಳುವುದರ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ

ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಕೆ.ಬಿ ರೂಪಾನಾಯ್ಕ ರವರ ಚಿಂತನೆಗಳನ್ನು ಸಾಕಾರಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳು ನೆರವಿಗೆ ಬಂದಿವೆ. ‘ಕೇಳುವ ಕೈ ಪ್ರಾಮಾಣಿಕವಾಗಿದ್ದರೆ, ಕೊಡುಗೈ ದಾನಿಗಳಿಗೆ ಬರವಿಲ್ಲ’ ಎಂಬ ಮಾತಿನಂತೆ , ಬಹುರಾಷ್ಟ್ರೀಯ ಕಂಪನಿ ಅಜೀಮ್ ಪ್ರೇಮ್ ಜಿ ಫೌಂಡೇಶನ್, ಪ್ರಥಮ ಫೌಂಡೇಶನ್, ಭಾರತೀಯ ಜೈನ ಸಂಘಟನೆ ಮತ್ತು ಡಿಎನ್ಎ, ನವದೆಹಲಿಯ ಹಂಗರ್ ಪ್ರಾಜೆಕ್ಟ್, ಮುಂಬೈನ ಚೈಲ್ಡ್ ಇಂಡಿಯಾ ಪೌಂಡೇಶನ್, ಗುಜರಾತಿನ ಎಫ್ ಬಿ ಎಸ್, ದಾವಣಗೆರೆ ಎನೆಬಲ್ ಇಂಡಿಯಾ ಮತ್ತು ರೂಟ್ ಸೆಟ್, ದೇಶಪಾಂಡೆ ಫೌಂಡೇಶನ್, ನವದೆಹಲಿ ಪ್ಲಾನ್ ಇಂಟರ್ ನ್ಯಾಷನಲ್ ಅಂಧೇರಿ ಟ್ರಸ್ಟ್ ಸೇರಿದಂತೆ ಅನೇಕ ಸಂಘ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳು ಕೈಜೋಡಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

‘ನಡ ಬಗ್ಗಿಸದ ‘ಸ್ಪೂರ್ತಿ ‘

ಗ್ರಾಮಗಳಲ್ಲಿ ಸರ್ಕಾರದ ಯೋಜನೆ ಅಥವಾ ಕಾಮಗಾರಿಗಳು ಅನುಷ್ಠಾನಕ್ಕೆ ತರುವುದು ಅಷ್ಟು ಸುಲಭದ ಮಾತಲ್ಲ, ಬಹುತೇಕ ಯೋಜನೆಗೆ ರಾಜಕಾರಣ ಅಥವಾ ರಾಜಕಾರಣಿಗಳಿಂದ ಅಡೆತಡೆಗಳು ಇದ್ದೇ ಇರುತ್ತದೆ, ಅದನ್ನು ನಿಭಾಯಿಸುವ ಬುದ್ದಿವಂತಿಕೆ ಹಾಗೂ ಶಕ್ತಿ ಇರದಿದ್ದರೆ ಅದರಿಂದಾಗುವ ದುಷ್ಪರಿಣಾಮಗಳು ಜೀವಕ್ಕೆ ಸಂಚಕಾರ ತಂದೊಡುತ್ತವೆ.

ಇಂತಹ ಅನೇಕ ಸವಾಲುಗಳು ಹಾಗೂ ಕೆಲವು ಅಹಿತಕರ ಘಟನೆಗಳಿಂದ ಬಚಾವಾಗಿರುವ ರೂಪಾನಾಯ್ಕ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುತ್ತಾರೆ. ಚನ್ನಗಿರಿ ತಾಲೂಕಿನಲ್ಲಿರುವ ಒಂದು ( ಹೆಸರು ಬೇಡ ) ಹಳ್ಳಿಯಲ್ಲಿ ರೈತರ ಹೋರಾಟದಲ್ಲಿ ಪಾಲ್ಗೊಂಡು ವಾಪಸು ಬೈಕ್ ನಲ್ಲಿ ತೆರಳುವಾಗ ಗುಡ್ಡದ ಪೊದೆಯಲ್ಲಿ ಅಡಗಿ ಕುಳಿತ ನಾಲ್ಕೈದು ಜನರ ಗುಂಪು ಕಲ್ಲು ತೂರಾಟ ನಡೆಸುತ್ತಾರೆ, ರಭಸವಾಗಿ ತೂರಿ ಬಂದ ಕಲ್ಲುಗಳಲ್ಲಿ ತಲೆಗೆ ಹೆಲ್ಮೆಟ್ ಹಾಕಿದ್ದರಿಂದ ಮುಖದ ಗದ್ದಕ್ಕೆ ತಗುಲಿ ರಕ್ತಶ್ರಾವವಾಗುತ್ತದೆ.

ಆ ಸಮಯದಲ್ಲಿ ಹಿಂದೆ ಬರುತ್ತಿದ್ದ ಬೈಕ್ ಸವಾರರು ಕೂಗಿಕೊಂಡಿದ್ದರಿಂದ ಈ ಘಟನೆಯಲ್ಲಿ ಬಚಾವಾಗಿ ಊರು ತಲುಪಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಈ ಘಟನೆಗೆ ಸಂಬಂಧಪಟ್ಟಂತೆ ಯಾರ ವಿರುದ್ಧವು ಪೊಲೀಸ್ ಠಾಣೆಗೆ ದೂರು ನೀಡದೆ ಹೋರಾಟದಲ್ಲಿ ಇಂತಹ ಘಟನೆಗಳು ಮಾಮೂಲು ಎಂದು ಜನಮುಖಿ ಕಾರ್ಯಕ್ರಮಗಳಿಗೆ ಸ್ಪೂರ್ತಿ ತುಂಬುತ್ತಾರೆ.

ಗ್ರಾಮಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದ್ದ ಕೆ.ಬಿ ರೂಪಾನಾಯ್ಕ ಅವರಿಗೆ ಗ್ರಾಮಸ್ಥರ,ಸಂಘ ಸಂಸ್ಥೆಗಳ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಬೆಂಬಲ ಸದಾ ಇರುತ್ತಿತ್ತು. ಅವರು ಯಾವುದಾದರೂ ಹೋರಾಟಕ್ಕೆ ಕರೆ ನೀಡಿದರೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಇದು ರಾಜಕಾರಣಿಗಳ ಕಣ್ಣು ಕೆಂಪಾಗಲು ಕಾರಣವೂ ಆಗಿತ್ತು.ಚುನಾವಣೆಗಳು ಬಂತೆಂದರೆ ರಾಜಕಾರಣಿಗಳು ಇವರ ಹಿಂದೆ ದುಂಬಾಲು ಬೀಳುತ್ತಿದ್ದರು. ತಾವು ಹೇಳಿದ ಅಭ್ಯರ್ಥಿಗೆ ಮತ ಹಾಕಿಸಲು ಹಾಗೂ ಚುನಾವಣೆಯಲ್ಲಿ ಪ್ರಚಾರ ಮಾಡಲು ಒತ್ತಾಯಿಸುತ್ತಿದ್ದರು.

ರಾಜಕಾರಣಿಗಳ ಬೇಡಿಕೆಯನ್ನು ಅಷ್ಟೇ ನಯವಾಗಿ ತಿರಸ್ಕಾರ ಮಾಡುತ್ತಿದ್ದರಿಂದ ಸಹಜವಾಗೇ ಅವರ ಆಕ್ರೋಶಕ್ಕೆ ಗುರಿಯಾಗುತ್ತಿದ್ದರು, ಹಾಗಾಗಿ ‘ಸ್ಪೂರ್ತಿ’ ಸಂಸ್ಥೆ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಿಸುವುದು, ಕೆ.ಬಿ ರೂಪಾನಾಯ್ಕ ರವರನ್ನು ನಕ್ಸಲ್ ಪಟ್ಟಿಗೆ ಸೇರಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕುವುದು, ಮಹಿಳೆಯರಿಂದ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಕೇಸು ದಾಖಲಿಸುವುದು, ಕಾಮಗಾರಿಗಳು ನಡೆಯುವ ಸ್ಥಳದಲ್ಲಿ ಕಿಡಿಗೇಡಿಗಳನ್ನು ಬಿಟ್ಟು ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಹಿಂಸಿಸುವುದು ಸೇರಿದಂತೆ ಅನೇಕ ಕಿರುಕುಳಗಳನ್ನು 25 ವರ್ಷದ ಹೋರಾಟದಲ್ಲಿ ಅನುಭವಿಸಿ ನಡ ಗಟ್ಟಿ ಮಾಡಿಕೊಂಡಿದ್ದಾರೆ

ಹೋರಾಟದ ಅನೇಕ ಏಳು- ಬೀಳುಗಳ ನಡುವೆ 25 ವಸಂತಗಳನ್ನು ಕಳೆದಿರುವ ‘ಸ್ಪೂರ್ತಿ’ ಸಂಸ್ಥೆ ಶತಮಾನೋತ್ಸವ ಆಚರಿಸಲಿ ಎಂದು ಹಾರೈಸುತ್ತಾ, ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿರುವ ಇಂತಹ ಸಂಘ ಸಂಸ್ಥೆಗಳಿಗೆ ನಾಗರೀಕ ಸಮಾಜ ಬೆಂಬಲವಾಗಿ ನಿಲ್ಲಬೇಕಾಗಿದೆ.

– ಜಿ ಎನ್ ಜಿ

[pj-news-ticker]