Trending

ಬೀದಿ ನಾಯಿ ದಾಳಿಯಿಂದ ರೇಬೀಸ್ ಕಾಯಿಲೆಗೆ ತುತ್ತಾಗಿ ಬಾಲಕಿ ಸಾವು, ಕುಟುಂಬಸ್ಥರ ಆಕ್ರಂದನ

Spread the love

ದಾವಣಗೆರೆ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮಕ್ಕಳು, ವೃದ್ಧರು ಎನ್ನದೇ ಬೀದಿ ನಾಯಿಗಳು ದಾಳಿ ಮಾಡ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜನಸಾಮಾನ್ಯರು ಬೀದಿ ನಾಯಿ ಹಾವಳಿಗೆ ಕಡಿವಾಣ ಹಾಕಿ ಎಂದು ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರು ಬೀದಿ ನಾಯಿಗಳ ಉಪಟಳಕ್ಕೆ ಬ್ರೇಕ್ ಬಿದ್ದಿಲ್ಲ.

ದುರಂತ ಎಂದರೆ ಬೀದಿ ನಾಯಿ ದಾಳಿಗೊಳಗಾಗಿದ್ದ ನಾಲ್ಕು ವರ್ಷದ ಬಾಲಕಿ ರೇಬೀಸ್​ಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾಳೆ.

ನಗರದ ಶಾಸ್ತ್ರಿ ಲೇಔಟ್​ನಲ್ಲಿ ಮನಕಲಕುವ ಘಟನೆ ನಡೆದಿದೆ. ನಾಲ್ಕೈದು ತಿಂಗಳ ಹಿಂದೆ ಇಲ್ಲಿನ ಮೊಹಮ್ಮದ್ ಶಾಕೀರ್ ಆಲಿ, ಅತೀಹಾ ಖಾನಂ ದಂಪತಿಯ ಪುತ್ರಿ ಖದೀರಾ ಬಾನು (4) ಮನೆ ಮುಂದೆ ಆಟವಾಡುತ್ತಿದ್ದಾಗ ಬೀದಿನಾಯಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು.

ಪೋಷಕರು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಗೊಂಡಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಿದ್ದರು. ಗುಣಮುಖಳಾಗಿದ್ದ ಬಾಲಕಿ, ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಂದ್ದಾಳೆ. ಆಗ ಪೋಷಕರು ಮತ್ತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ, ರೇಬೀಸ್ ಕಾಯಿಲೆಯಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಬಾಲಕಿ ಸಾವು: ರೇಬೀಸ್ ಕಾಯಿಲೆಗೆ ತುತ್ತಾಗಿದ್ದ ಬಾಲಕಿ ಖದೀರಾ ಬಾನುಗೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ನೀಡಿದ ವೈದ್ಯರು ಬಾಲಕಿ ಜೀವ ಉಳಿಸಲು ಎಷ್ಟೇ ಪ್ರಯತ್ನಪಟ್ಟರು ಭಾನುವಾರ ರಾತ್ರಿ ಆಸ್ಪತ್ರೆಯಲ್ಲೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಮಗಳನ್ನು ಉಳಿಸಿಕೊಳ್ಳಲು 8 ರಿಂದ 9 ಲಕ್ಷ ರೂಪಾಯಿ ಖರ್ಚು ಮಾಡಿದರೂ ಸಾಧ್ಯವಾಗಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡರು.‌

ನಮ್ಮ ಮಗುವಿಗಾದ ಗತಿ ಬೇರೆಯವರಿಗಾಗಬಾರದು ಎಂದು ಪೋಷಕರು ಮನವಿ ಮಾಡ್ತಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ನಿಯಂತ್ರಣ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಮೃತ ಬಾಲಕಿಯ ಚಿಕ್ಕಪ್ಪ ಸಾಜೀದ್ ಪ್ರತಿಕ್ರಿಯಿಸಿ, “ನಾಲ್ಕೈದು ತಿಂಗಳ ಹಿಂದೆ ನಾಯಿ ದಾಳಿ ಮಾಡಿತ್ತು. ನಾಯಿ ದಾಳಿಯಿಂದ ಮಗಳು ರೇಬೀಸ್ ರೋಗಕ್ಕೆ ತುತ್ತಾಗಿದ್ದಾಳೆ ಎಂದು ವೈದ್ಯರು ಹೇಳಿದ್ದರು. ಅಲ್ಲದೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನಿರಂತರವಾಗಿ ಚಿಕಿತ್ಸೆ ನಡೆಯುತ್ತಿತ್ತು. ರೇಬೀಸ್​ಗೆ ಚಿಕಿತ್ಸೆ ಇಲ್ಲ ಎಂದು ವೈದ್ಯರು ಹೇಳಿದ್ದರು. ನಾಯಿ ಕಾಟ ಹೆಚ್ಚಾಗಿದೆ, ಚಿಕ್ಕ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡ್ತಿವೆ. ಆದರೂ ಯಾರೂ ಕ್ರಮ ಮಾತ್ರ ಕೈಗೊಳ್ಳುತ್ತಿಲ್ಲ” ಎಂದು ದೂರಿದರು.

[pj-news-ticker]