ಬೆಂಗಳೂರು: ಬೆಂಗಳೂರಿಗರ ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಗಿಗುಡ್ಡ ಮೆಟ್ರೋ ಸ್ಟೇಶನ್‌ನಲ್ಲಿ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು. ನಂತರ ರಾಗಿಗುಡ್ಡದಿಂದ ಮೆಟ್ರೋದಲ್ಲಿ ಟಿಕೆಟ್ ಪಡೆದು ಪ್ರಯಾಣಿಸಿದರು.
ಈ ಸಂದರ್ಭದಲ್ಲಿ ಅವರ ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಚಿವ ಅಶ್ವಿನಿ ವೈಷ್ಣವ್, ಸಂಸದರಾದ ತೇಜಸ್ವಿ ಸೂರ್ಯ, ಸೋಮಣ್ಣ, ಸಿಎನ್ ಮಂಜುನಾಥ್, ಶೋಭಾ ಕರಂದ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ವಂದೇ ಭಾರತ್ ರೈಲಿಗೆ ಚಾಲನೆಯ ಬಳಿಕ ಬುಲೆಟ್‌ಪ್ರೂಫ್ ಕಾರಿನಲ್ಲಿ ರಾಗಿಗುಡ್ಡದತ್ತ ಪ್ರಯಾಣಿಸಿದ ಪ್ರಧಾನಿಗೆ ಜನ ಹೂವಿನ ಸುರಿಮಳೆ ಸುರಿದು ಜಯಕಾರ ಕೂಗಿ ಸ್ವಾಗತಿಸಿದರು. ಮಳೆ ಸುರಿಯುತ್ತಿದ್ದರೂ ಜನ ಅದನ್ನು ಲೆಕ್ಕಿಸಲಿಲ್ಲ. ಅಸಂಖ್ಯ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ದಾರಿಯುದ್ದಕ್ಕೂ ನಿಂತು ಮೋದಿಗೆ ಸ್ವಾಗತ ಕೋರಿದರು. ಮೋದಿ.. ಮೋದಿ ಎಂದು ಕೂಗುತ್ತಿದ್ದ ತಮ್ಮ ಅಭಿಮಾನಿಗಳತ್ತ ಪ್ರಧಾನಿ ಮೋದಿ ಕಾರಿನಿಂದಲೇ ಕೈಬೀಸಿದರು.
ಮೇಖ್ರಿ ಸರ್ಕಲ್‌ನಿಂದ ನೇರವಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಬೆಂಗಳೂರಿನಿಂದ ಬೆಳಗಾವಿಗೆ ಹೋಗುವ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಇದು ಕರ್ನಾಟಕದ ಮೂರನೇ ವಂದೇ ಭಾರತ್ ರೈಲು ಇದಾಗಿದ್ದು, ಎಂಟು ಜಿಲ್ಲೆಗಳನ್ನು ಹಾದು ಹೋಗುತ್ತದೆ. ಇದರ ಜೊತೆಗೆ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಇತರೆ ಎರಡು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಅಮೃತಸರ- ವೈಷ್ಣೋದೇವಿ ಕತ್ರಾ ಮತ್ತು ನಾಗ್ಪುರ- ಪುಣೆ ರೈಲುಗಳಿಗೂ ಇಂದೇ ಚಾಲನೆ ಸಿಕ್ಕಿದೆ.
