ಹೊಸನಗರ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ರಸ್ತೆಯಲ್ಲಿ ನಿರಂತರ ಮಳೆಯಿಂದಾಗಿ ಭೂ ಕುಸಿತದ ಸಂಭವ ಹೆಚ್ಚಾದ ಹಿನ್ನೆಲೆಯಲ್ಲಿ, ಮಾಸ್ತಿಕಟ್ಟೆಯಿಂದ ಹೊಸಂಗಡಿವರೆಗೆ ಭಾರಿ ವಾಹನಗಳ ಸಂಚಾರಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಸೂಚನೆ ಹೊರಡಿಸಿದ್ದಾರೆ.
ಬಾಳೆಬರೆ ಘಾಟ್ (SH-52) ರಸ್ತೆಯ 42.10 ರಿಂದ 42.20 ಹೇರ್ ಪಿನ್ ತಿರುವು ಭಾಗದಲ್ಲಿ ಮಣ್ಣಿನ ಕುಸಿತ ಕಂಡುಬಂದಿದೆ. ಸ್ಥಳದಲ್ಲಿ ತಾತ್ಕಾಲಿಕ ದುರಸ್ತಿಗಾಗಿ ಕಾರ್ಯಾರಂಭವಾಗಿದೆ, ಆದರೆ ಮಳೆ ಚುರುಕಾಗಿ ಮುಂದುವರಿದಿರುವುದರಿಂದ ಮತ್ತಷ್ಟು ಕುಸಿತ ಸಂಭವನೀಯವಾಗಿದೆ. ಭಾರಿ ವಾಹನ ಸಂಚಾರವನ್ನು ಮಳೆಗಾಲದವರೆಗೆ ನಿಷೇಧಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ, ಆರ್‌ಟಿಒ ಹಾಗೂ ಉಡುಪಿ ಜಿಲ್ಲಾಧಿಕಾರಿ ರವರ ಶಿಫಾರಸ್ಸು, ಪರ್ಯಾಯ ಮಾರ್ಗ, ಪರಿಣಾಮಗಳ ಮಾಹಿತಿ ಪಡೆದು ಅಧಿಸೂಚನೆ ಹೊರಡಿಸಲಾಗಿದೆ.
ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಹೊಸನಗರ ದಿಂದ ಹುಲಿಕಲ್ ಮಾರ್ಗದ ಮೂಲಕ ಸಂಚರಿಸುತ್ತಿದ್ದ ಭಾರೀ ವಾಹನಗಳಿಗೆ ನಗರ ಕೊಲ್ಲೂರು, ಬೈಂದೂರು ಮಾರ್ಗವನ್ನು ಸೂಚಿಸಲಾಗಿದೆ.
ಆ.6 ಬುಧವಾರ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು ಅಲ್ಲಿಂದಲೇ ನಿಷೇಧ ಜಾರಿಗೆ ಬರಲಿದೆ.
