ಬೆಂಗಳೂರು: ಸಾರಿಗೆ ನೌಕರರ ಒಕ್ಕೂಟದ ಪ್ರತಿನಿಧಿಗಳ ಜತೆ ಸಿಎಂ ಸಂಧಾನ ವಿಫಲವಾದ ಹಿನ್ನೆಲೆ ಆ.5ರಿಂದ ಸಾರಿಗೆ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಆದರೆ, ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಮುಂದೂಡಲು ನಿರ್ದೇಶನ ನೀಡಿದೆ.
ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಮುಂದೂಡಲು ನ್ಯಾ.ಕೆ.ಎಸ್.ಮುದಗಲ್, ಎಂ.ಜಿ.ಎಸ್ ಕಮಲ್ ಅವರಿದ್ದ ವಿಭಾಗಗೀಯ ಪೀಠ ಸೂಚಿಸಿದೆ. ಮುಷ್ಕರಕ್ಕೆ ಅವಕಾಶ ನೀಡಬಾರದು. ಇದರಿಂದ ಜನಜೀವನ ಅಸ್ತವ್ಯಸ್ತವಾಗಲಿದೆ ಎಂದು ಬೆಂಗಳೂರಿನ ಜೆ. ಸುನೀಲ್ ಹಾಗೂ ಮತ್ತಿತರರು ಪಿಐಎಲ್ ಸಲ್ಲಿಕೆ ಮಾಡಿದ್ದರು.
ಹೀಗಾಗಿ ಒಂದು ದಿನ ಮುಷ್ಕರ ಮುಂದೂಡಲು ಸೂಚಿಸಿ, ಅರ್ಜಿ ವಿಚಾರಣೆಯನ್ನು ವಿಭಾಗಗೀಯ ಪೀಠ ಮುಂದೂಡಿದೆ. ಬುಧವಾರ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 5ರಿಂದ ನಾಲ್ಕು ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನೌಕರರು ನಿರ್ಧರಿಸಿದ್ದರು.
