ನವದೆಹಲಿ: ದೇಶದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ ಮತ್ತು ಬಳಕೆಗೆ ತಡೆಯೊಡ್ಡಿದೆ.
ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ, ರಸ್ತೆ ಬದಿಗಳಲ್ಲಿ ಮಾರಾಟ ಆಗುತ್ತಿರುವ ಕಳಪೆ ಹೆಲ್ಮೆಟ್ಗಳಿಗೆ ಬ್ರೇಕ್ ಹಾಕುವ ಜತೆಗೆ ವಾಹನ ಸವಾರರಿಗೆ BIS ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್ ಬಳಕೆಯನ್ನೇ ಕಡ್ಡಾಯಗೊಳಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ಭಾರತೀಯ ಮಾನದಂಡಗಳ ಬ್ಯೂರೋ (BIS) ಕಳಪೆ ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ದೆಹಲಿಯಲ್ಲಿ ಈಗಾಗಲೇ 2500ಕ್ಕೂ ಹೆಚ್ಚು ಕಳಪೆ ಹೆಲ್ಮೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
2024-25ನೇ ಆರ್ಥಿಕ ವರ್ಷದಲ್ಲಿ BIS ದೆಹಲಿಯಲ್ಲಿ 30ಕ್ಕೂ ಹೆಚ್ಚು ಹೆಲ್ಮೆಟ್ ತಯಾರಕ ಘಟಕಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಪರವಾನಗಿ ರದ್ದಾದ ಹಾಗೂ ಅವಧಿ ಮುಗಿದ 9 ತಯಾರಕರು ಕಂಡುಬಂದಿದ್ದು, ಇವರಿಂದ 2,500ಕ್ಕೂ ಹೆಚ್ಚು ಹೆಲ್ಮೆಟ್ಗಳನ್ನು ವಶಪಡಿಸಿಕೊಂಡಿದೆ.
ದೆಹಲಿಯ ಅಂಗಡಿಗಳು ಮತ್ತು ರಸ್ತೆ ಬದಿ ವ್ಯಾಪಾರಸ್ಥರಲ್ಲೂ ಶೋಧ ನಡೆಸಿ, 500ಕ್ಕೂ ಹೆಚ್ಚು ಕಳಪೆ ಗುಣಮಟ್ಟದ ಹೆಲ್ಮೆಟ್ಗಳನ್ನು ವಶಪಡಿಸಿಕೊಂಡ BIS ಅಧಿಕಾರಿಗಳ ತಂಡ, ವರ್ತಕರು ಮತ್ತು ತಯಾರಕರ ವಿರುದ್ಧ ಕಾನೂನು ಕ್ರಮ ಜರುಗಿಸಿದೆ.
ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದೆ ಮತ್ತು ಹೆಲ್ಮೆಟ್ ಧರಿಸಿದ್ದರೂ ಕಳಪೆ ಗುಣಮಟ್ಟದ್ದಾಗಿದ್ದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು BIS ಅನೇಕ ಪ್ರಕರಣಗಳಲ್ಲಿ ಇದನ್ನು ಗಮನಿಸಿದ್ದು, ಬೈಕ್ ಸವಾರರ ಸುರಕ್ಷತೆ ದೃಷ್ಟಿಯಿಂದ ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಕರು ಮತ್ತು ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
BIS, ನಿಯಮಿತ ಕಾರ್ಖಾನೆ ಮತ್ತು ಮಾರುಕಟ್ಟೆ ಮೇಲೆ ಕಣ್ಗಾವಲಿರಿಸಿದ್ದು, 500ಕ್ಕೂ ಹೆಚ್ಚು ಹೆಲ್ಮೆಟ್ ಮಾದರಿಗಳನ್ನು ಪರೀಕ್ಷಿಸಿದೆ. 30ಕ್ಕೂ ಹೆಚ್ಚು ಶೋಧ ಕಾರ್ಯಾಚರಣೆ ನಡೆಸಿ ಗುಣಮಟ್ಟದ ಮಾನದಂಡಗಳನ್ನು ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಸಹ ಗ್ರಾಹಕರ ರಕ್ಷಣೆ ಮತ್ತು ಸುರಕ್ಷಿತ ವಾಹನ ಸಂಚಾರಕ್ಕಾಗಿ ಕಳಪೆ-ಗುಣಮಟ್ಟದ ಹೆಲ್ಮೆಟ್ ಮಾರಾಟದ ವಿರುದ್ಧ ಸಮರ ಸಾರಿದೆ. ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವು-ನೋವು ತಡೆಯುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಹೆಲ್ಮೆಟ್ ಮಾರಾಟ-ಖರೀದಿಗೆ ಆದ್ಯತೆ ನೀಡುತ್ತಿದೆ.
