ಬೆಂಗಳೂರು: ʼಬಿಗ್ ಬಾಸ್ ಕನ್ನಡ -12ʼ ರ ಬಗ್ಗೆ ಆಯೋಜಕರು ಮಹತ್ವದ ಸುದ್ದಿಗೋಷ್ಠಿ ನಡೆಸಿ, ಕಾರ್ಯಕ್ರಮದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
ʼಬಿಗ್ ಬಾಸ್ ಕನ್ನಡʼದ ಹೊಸ ಸೀಸನ್ ಆರಂಭದ ಕುರಿತು ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ.
ಪ್ರತಿ ಸಲ ಶೋ ಆರಂಭವಾಗುವ ಮುನ್ನ ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಇರುತ್ತಾರೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡಲು ಶುರುವಾಗುತ್ತಿತ್ತು. ಆದರೆ ಈ ವರ್ಷ ʼಬಿಗ್ ಬಾಸ್ ಹೋಸ್ಟ್ʼ ಯಾರು ಎನ್ನುವುದೇ ಎಲ್ಲರಿಗೂ ಕುತೂಹಲವಿತ್ತು. ಈ ಬಗ್ಗೆ ಆಯೋಜಕರು ಸುದ್ದಿಗೋಷ್ಠಿ ನಡೆಸಿ ʼಬಿಗ್ ಬಾಸ್ ಕನ್ನಡ -12ʼರ ಬಗ್ಗೆ ಮಾಹಿತಿ ನೀಡಿದ್ದಾರೆ.
ಜೀಯೋ ಸಂಸ್ಥೆಯ ಕೃಷ್ಣನ್ ಅವರು ಮಾತನಾಡಿ, ʼಬಿಗ್ ಬಾಸ್ʼ ಎನ್ನುವುದು ಬರೀ ಶೋವಲ್ಲ. ಇದು ಜನರೊಂದಿಗೆ ಬೆರೆತ ಕಾರ್ಯಕ್ರಮ. ಸುದೀಪ್ ಅವರೇ ಈ ಬಾರಿ ಶೋ ನಡೆಸಿಕೊಡಲಿದ್ದಾರೆ ಎಂದಿದ್ದಾರೆ.
ಸುದೀಪ್ ಅವರೇ ಮತ್ತೆ ಬಿಗ್ ಬಾಸ್ ಮನೆಗೆ ಹೋಸ್ಟ್ ಆಗಿ ಮರಳಬೇಕೆಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಆಯೋಜಕರು ಕಿಚ್ಚ ಮನವೊಲಿಸಿದ್ದು, ಮತ್ತೆ ಕಿಚ್ಚನನ್ನೇ ನಿರೂಪಕರಾಗಿ ಕರೆತಂದಿದ್ದಾರೆ. ಆ ಮೂಲಕ ಹರಿದಾಡಿದ್ದ ಎಲ್ಲ ಗೊಂದಲಕ್ಕೂ ಫುಲ್ಸ್ಟಾಪ್ ಇಟ್ಟು, ʼದೊಡ್ಮನೆಗೆ ಕಿಚ್ಚನೇ ಬಿಗ್ ಬಾಸ್ʼ ಎಂದು ಹೇಳಿದ್ದಾರೆ.
