ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಮಗನೊಬ್ಬ ರಸ್ತೆಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. “ಬರುತ್ತೇನೆ, ಇಲ್ಲೇ ಇರು” ಎಂದು ಹೇಳಿ ರಸ್ತೆಯಲ್ಲಿ ತಾಯಿಯನ್ನು ಬಿಟ್ಟು ಮಗ ಹೋಗಿದ್ದಾನೆ ಎನ್ನಲಾಗಿದೆ. ಮಗನ ಬರುವಿಕೆಗಾಗಿ ಕಾಯುತ್ತಿದ್ದ ತಾಯಿಗೆ ಸ್ಥಳೀಯರು ಆಹಾರ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗ ಬಿಟ್ಟು ಹೋದ ಮೇಲೆ ರಸ್ತೆ ಬದಿಯೇ ಕುಳಿತಿದ್ದ ತಾಯಿ, ‘ನನ್ನ ಮಗ ಬಂದು ಕರೆದುಕೊಂಡು ಹೋಗುತ್ತಾನೆ’ ಎನ್ನುತ್ತಿದ್ದರು. ನಂತರ ಸ್ಥಳೀಯಿಂದ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ವೃದ್ಧೆಯನ್ನು ರಕ್ಷಿಸಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುಮಾರು 70-80 ವರ್ಷದ ವೃದ್ಧೆ ತೀವ್ರ ಮಾನಸಿಕ ಅಸ್ವಸ್ಥಳಾಗಿದ್ದು, ‘ನನ್ನ ಮಗ ಬಂದು ಕರೆದುಕೊಂಡು ಹೋಗ್ತಾನೆ’ ಎಂಬ ನಂಬಿಕೆಯಲ್ಲಿಯೇ ರಸ್ತೆಯ ಬದಿಯಲ್ಲಿ ಕುಳಿತಿದ್ದಳು. ಆದರೆ, ತಾಯಿಯನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಹೊಂದಿದ್ದ ಮಗ ಮಾತ್ರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ವೃದ್ಧೆ ರಸ್ತೆ ಬದಿ ಇರುವುದನ್ನು ಕಂಡ ಕಿರುಗಾವಲು ಗ್ರಾಮಸ್ಥರು ಆ ವೃದ್ಧೆಗೆ ಆಹಾರ ನೀಡಿದ್ದಾರೆ. ವೃದ್ಧೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತವಾಗಿ, ವೃದ್ಧೆಯನ್ನು ರಕ್ಷಣೆ ಮಾಡಿದೆ. ಸದ್ಯ ವೃದ್ಧೆಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
