ಶಿವಮೊಗ್ಗ: ‘ಜಗತ್ತಿನಲ್ಲಿ ಕ್ರಾಂತಿಗಳು ನಡೆದು ಅನೇಕ ಬದಲಾವಣೆ ತಂದಿರಬಹುದು. ಆದರೆ ಕ್ರಾಂತಿಯಿಂದಲೂ ಆಗದ ಬದಲಾವಣೆ ಪುಸ್ತಕಗಳಿಂದ ಆಗಿವೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದರು.
ಅಹರ್ನಿಶಿ ಪ್ರಕಾಶನದಿಂದ ಇಲ್ಲಿನ ಕಮಲಾ ನೆಹರು ಕಾಲೇಜಿನಲ್ಲಿ ಕನ್ನಡಕ್ಕೆ ಅನುವಾದಿತ ಅಂಬೇಡ್ಕರ್ ಅವರ ಸಂಪಾದಕೀಯ ಬರಹಗಳ ಸಂಗ್ರಹ ‘ಮೂಕ ನಾಯಕ’ ಹಾಗೂ ‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮಾಯಣ, ಮಹಾಭಾರತ, ಕುರಾನ್, ಬೈಬಲ್ ಹಾಗೂ ಬಸವಾದಿ ಶರಣರ ಬರಹಗಳು ಸೇರಿದಂತೆ ಬುದ್ಧನ ಬೋಧನೆಗಳು ಜಗತ್ತಿನ ಜನರನ್ನು ಮುನ್ನಡೆಸುತ್ತಿವೆ. ಆದ್ದರಿಂದ, ಪುಸ್ತಕ ಓದುವುದು, ಬರೆಯುವುದು, ದಾನ ಮಾಡುವ ಸಂಸ್ಕೃತಿ ರೂಢಿಸಿಕೊಳ್ಳಬೇಕು. ಪುಸ್ತಕದ ಸಂಸ್ಕೃತಿ ಕಟ್ಟಬೇಕು ಎಂದರು.
ವಿಮರ್ಶಕ ವಿ.ಎಲ್.ನರಸಿಂಹಮೂರ್ತಿ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯ, ಜಾತಿ ಪದ್ಧತಿ ಹಾಗೂ ಶೋಷಣೆ ವಿರುದ್ಧ ಹೋರಾಡಲು ಹಾಗೂ ತಳ ಸಮುದಾಯದ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಯನ್ನು ಪ್ರಶ್ನಿಸಲು 1920ರಲ್ಲಿ ‘ಮೂಕನಾಯಕ’ ಪತ್ರಿಕೆಯನ್ನು ಅಂಬೇಡ್ಕರ್ ಹೊರ ತಂದರು. ಇದರ ಜತೆಗೆ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಕಾರ್ಯ ಅಂಬೇಡ್ಕರ್ ಮಾಡಿದ್ದಾರೆ ಎಂದು ಹೇಳಿದರು.
ದೆಹಲಿಯ ಪ್ರಾಧ್ಯಾಪಕ ರಮೇಶ ಅರೋಲಿ ಮಾತನಾಡಿ, ಮೂಕನಾಯಕ ಪುಸ್ತಕದ ಮೂಲ ಕೃತಿಯಿಂದ ಕನ್ನಡಕ್ಕೆ ಅನುವಾದಗೊಳಿಸುವುದು ಸವಾಲಾಗಿತ್ತು. 100 ವರ್ಷ ಹಿಂದಿನ ಭಾಷೆಯನ್ನು ಈ ಕಾಲಘಟ್ಟದ ಜನರಿಗೆ ತಲುಪಿಸಲು ಎಚ್ಚರಿಕೆಯ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದರು.
ಉಪನ್ಯಾಸಕಿ ವೃಂದಾ ಹೆಗ್ಡೆ ಅವರು ಅಂಬೇಡ್ಕರ್ ದಿನಚರಿ ಪುಸ್ತಕ ಕುರಿತು ಮಾತನಾಡಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಸಣ್ಣರಾಮ, ಪ್ರಕಾಶಕಿ ಅಕ್ಷತಾ ಹುಂಚದ ಕಟ್ಟೆ, ಪ್ರಾಧ್ಯಾಪಕ ಪಿ.ಆರಡಿಮಲ್ಲಯ್ಯ ಕಟ್ಟೇರ ಇದ್ದರು.
