Trending

ಶಿವಮೊಗ್ಗ: ಕೊಲೆ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜಾಮೀನು ಮೇಲಿದ್ದವನ ಹತ್ಯೆ

Spread the love

ಶಿವಮೊಗ್ಗ: ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜಾಮೀನು ಮೇಲಿದ್ದವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಘಟನೆ ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.

ಅವಿನಾಶ್(38) ಕೊಲೆಯಾದ ವ್ಯಕ್ತಿ. ಈತ ಬೊಮ್ಮನಕಟ್ಟೆಯ ನಿವಾಸಿ. ಬಡಾವಣೆಯ ಕೆರೆ ಏರಿ ಬಳಿ ಕೊಲೆ ಮಾಡಲಾಗಿದೆ.

ರಾತ್ರಿ ಮನೆ ಬಳಿ ಇದ್ದವನನ್ನು ಬೈಕ್​ನಲ್ಲಿ ಕರೆದುಕೊಂಡು ಹೋಗಿ, ಮದ್ಯ ಕುಡಿಸಿ ಕೊಲೆ ಮಾಡಿರುವ ಕುರಿತು ಸಂಶಯ ವ್ಯಕ್ತಪಡಿಸಲಾಗಿದೆ. ತಮಿಳು ಗಿರೀಶ ಎಂಬಾತನ ಕಡೆಯವರು ಕೊಲೆ ಮಾಡಿರುವ ಶಂಕೆಯನ್ನು ಸಂಬಂಧಿಕರು ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ತೋಟಕ್ಕೆ ಹೋದವರು ಮೃತದೇಹ ನೋಡಿ ವಿನೋಬನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಂಡ, ಶ್ವಾನದಳವೂ ಸಾಕ್ಷ್ಯ ಸಂಗ್ರಹಿಸಿದೆ.

ಅವಿನಾಶ್ ಕಳೆದ 10 ವರ್ಷದ ಹಿಂದೆ ಆಶ್ರಯ ಬಡಾವಣೆಯ ರೌಡಿಶೀಡರ್ ತಮಿಳು ಗಿರೀಶನ ಕೊಲೆ ಪ್ರಕರಣದಲ್ಲಿ ಎ-1 ಅಪರಾಧಿಯಾಗಿದ್ದ. ಇದೇ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೂ ಒಳಗಾಗಿದ್ದ. ಬಳಿಕ ಜಾಮೀನಿನ ಮೇಲೆ ಕಳೆದ ಒಂದೂವರೆ ವರ್ಷದ ಹಿಂದೆ ಜೈಲಿನಿಂದ ಹೊರಬಂದಿದ್ದಾನೆ. ಬೊಮ್ಮನಕಟ್ಟೆಯಲ್ಲಿ ಟೈಲ್ಸ್ ಹಾಗೂ ಪ್ಲಬಿಂಗ್ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅವಿನಾಶ್​ಗೆ ಇಬ್ಬರು ಅಕ್ಕಂದಿರಿದ್ದು, ತಂದೆ ಶೇಖರಪ್ಪ ಹಾಗೂ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಅವಿನಾಶ್​ ತಂದೆ ಶೇಖರಪ್ಪ ಪ್ರತಿಕ್ರಿಯಿಸಿ, “ಕೊಲೆ ಹೇಗೆ ನಡೆದಿದೆ ಎಂದು ನನಗೆ ಗೊತ್ತಿಲ್ಲ. ನಿನ್ನೆ ರಾತ್ರಿ ಮನೆಯಲ್ಲಿದ್ದವನು ಹೊರಗೆ ಬಂದಿದ್ದ. ನಾನು ಮನೆಯಲ್ಲಿ ಊಟ ಮಾಡಿ ಮಲಗಿದ್ದೆ. ಪ್ಲಂಬಿಂಗ್​, ಟೈಲ್ಸ್ ಕೆಲಸ ಮಾಡಿಕೊಂಡಿದ್ದ. ಹಿಂದೆ ಈತನ ವಿರುದ್ದ ಕೇಸಿತ್ತು. ಅದು ಈಗ ಮುಗೀತಾ ಬಂದಿದೆ. ನಾನು ಬೆಳಗ್ಗೆದ್ದವ ತೋಟಕ್ಕೆ ಹೋಗಿದ್ದೆ. ಈ ವೇಳೆ ನಮ್ಮ ಮನೆಯವರು ಫೋನ್​ ಮಾಡಿ, ಇಲ್ಲಿ ಕೊಲೆಯಾಗಿದೆ ಎಂದರು. ನಾನು ನಂಬಿರಲಿಲ್ಲ. ಯಾಕೋ ಮನಸ್ಸು ತಡೆಯದೆ, ಬಂದು ನೋಡಿದಾಗ ಅದು ನನ್ನ ಮಗನೇ ಎಂದು ತಿಳಿಯಿತು. ಕೊಲೆ ಯಾರು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ” ಎಂದು ತಿಳಿಸಿದರು.

[pj-news-ticker]