ಶಿವಮೊಗ್ಗ: ಹಲವು ಕಳ್ಳತನ ಪ್ರಕರಣಗಳಲ್ಲಿ ರಾಜ್ಯದ ವಿವಿಧ ಠಾಣೆಗಳ ಪೊಲೀಸರಿಗೆ ಬೇಕಾಗಿದ್ದ ಅಂತಾರಾಜ್ಯ ಕಳ್ಳ ಮಂಜು ಅಲಿಯಾಸ್ ಕಲ್ಕೆರೆ ಮಂಜು ಕಾಲಿಗೆ ಶಿವಮೊಗ್ಗ ಜಯನಗರ ಪೊಲೀಸರು ಗುಂಡು ಹೊಡೆದಿದ್ದಾರೆ.
ಕಲ್ಕೆರೆ ಮಂಜು ಶಿವಮೊಗ್ಗದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಯನಗರ ಪೊಲೀಸ್ ಠಾಣೆಯ ನವೀನ್ ಬ್ಯಾಕೋಡ್ ಹಾಗೂ ಅವರ ಸಿಬ್ಬಂದಿ ಕೋಟೆ ಗಂಗೂರಿಗೆ ಹೋದಾಗ ಮಂಜ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಮಂಜು ತಪ್ಪಿಸಿಕೊಳ್ಳಲು ಪೊಲೀಸ್ ಸಿಬ್ಬಂದಿ ದ್ಯಾಮಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಆದರೂ ಕೂಡ ಪಿಎಸ್ಐ ನವೀನ್ ಅವರು ಮಂಜನಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದರು. ಆದರೂ ಮಂಜು ಪರಾರಿಯಾಗಲು ಯತ್ನಿಸಿದ್ದು, ಆಗ ನವೀನ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಮಂಜುವಿನ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿ ದ್ಯಾಮಪ್ಪ ಹಾಗೂ ಕಳ್ಳ ಮಂಜುನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್, “ಕಳ್ಳ ಮಂಜುವಿನ ವಿರುದ್ಧ 70ಕ್ಕೂ ಅಧಿಕ ಪ್ರಕರಣಗಳಿವೆ. ಈತ ಕಳ್ಳತನ, ಕೊಲೆ ಬೆದರಿಕೆ, ದರೋಡೆಯಂತಹ ಪ್ರಕರಣಗಳಲ್ಲಿ ರಾಜ್ಯ ವಿವಿಧ ಪೊಲೀಸರಿಗೆ ಬೇಕಾಗಿದ್ದನು. ಈತ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಪ್ರಕರಣವೊಂದರಲ್ಲಿ ಶಿವಮೊಗ್ಗದ ಜಯನಗರ ಪೊಲೀಸರಿಗೆ ಬೇಕಾಗಿದ್ದನು. ಈತ ಮೂರು ದಿನಗಳಿಂದ ಶಿವಮೊಗ್ಗದಲ್ಲಿಯೇ ಇರುವ ಖಚಿತ ಮಾಹಿತಿ ಮೇರೆಗೆ ಜಯನಗರ ಪಿಎಸ್ಐ ನವೀನ್ ಅವರು ಬಂಧಿಸಲು ಹೋದಾಗ ಈತ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಶರಣಾಗುವಂತೆ ಸೂಚಿಸಿದರು ಸಹ ಪರಾರಿಯಾಗಲು ಯತ್ನಿಸಿದಾಗ ಮಂಜುನ ಎಡಗಾಲಿಗೆ ಗುಂಡು ಹಾರಿಸಲಾಗಿದೆ” ಎಂದು ತಿಳಿಸಿದರು.
