Trending

ʼಶಾಕ್‌ನಲ್ಲಿದ್ದೇನೆ…ʼ ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಡಿಕೆ ಶಿವಕುಮಾರ್

Spread the love

ಬೆಂಗಳೂರು: ʼಕಾಲ್ತುಳಿತದಲ್ಲಿ  ಸತ್ತವರು ನಮ್ಮ ಕುಟುಂಬದವರೇ, ನನಗೆ ಅತ್ಯಂತ ದುಃಖವಾಗುತ್ತಿದೆ. ಶಾಕ್‌ ಆಗಿದೆ. ಇಡೀ ಕರ್ನಾಟಕ ಇದಕ್ಕಾಗಿ ಶೋಕಿಸುತ್ತಿದೆʼ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಅವರು ಸಂತ್ರಸ್ತ ಕುಟುಂಬಗಳನ್ನು ನೆನೆದು ಕಣ್ಣೀರಿಟ್ಟರು. “ಸಣ್ಣ ಮಕ್ಕಳು ಸಂಕಷ್ಟಕ್ಕೀಡಾದ ದೃಶ್ಯಗಳನ್ನು ನಾನು ನೋಡಿದೆ. ಯಾವ ಫ್ಯಾಮಿಲಿಯೂ ಇದನ್ನು ಅರಗಿಸಿಕೊಳ್ಳಲಾಗದು. ನಮ್ಮ ಸರಕಾರ ಇರುವಾಗಲೇ ಇದು ನಡೆದಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು, ಒಪ್ಪಿಕೊಳ್ಳುತ್ತೇವೆʼ ಎಂದು ಅವರು ನುಡಿದಿದ್ದಾರೆ.

ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಬಿಜೆಪಿಯವರು, ಕುಮಾರಸ್ವಾಮಿ ಮುಂತಾದವರು ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಅವರು ಮೊದಲಿನಿಂದ ಇದನ್ನು ಮಾಡುತ್ತ ಬಂದಿದ್ದಾರೆ. ನಾನು ಪಟ್ಟಿ ಕೊಡಬಲ್ಲೆ. ನಾವು ಅಂಥದ್ದನ್ನು ಮಾಡುವುದಿಲ್ಲ. ಅವರು ಇದ್ದಾಗ ಏನೇನು ಆಗಿತ್ತು ಎಂಬುದನ್ನು ನಾನು ಬಲ್ಲೆ ಎಂದು ಅವರು ಟೀಕಿಸಿದರು.

ನಾನು ಸ್ಟೇಡಿಯಂ ಒಳಗೆ ಹೋಗುವವರೆಗೂ ನನಗೆ ಹೀಗೆಲ್ಲ ಆಗಿದೆ ಎಂದು ಗೊತ್ತೇ ಇರಲಿಲ್ಲ. ಮೀಡಿಯಾದವರೇ ಕೆಲವರು ಫೋನ್‌ ಮಾಡಿ ಹೀಗಾಗಿದೆ ಎಂದು ತಿಳಿಸಿದರು. ಮೊಬೈಲ್‌ ನೆಟ್‌ವರ್ಕ್‌ ಕೂಡ ಜಾಮ್‌ ಆಗಿತ್ತು. ನಂತರ ಕಮಿಷನರ್‌ ನನಗೆ ಕಾಲ್ತುಳಿತದ ವಿಷಯ ತಿಳಿಸಿದರು. ಕೂಡಲೇ ಕಾರ್ಯಕ್ರಮ ಮೊಟಕು ಮಾಡಿದೆವು. ಇದು ಒಬ್ಬರು ಇನ್ನೊಬ್ಬರ ಮೇಲೆ ದೋಷಾರೋಪಣೆ ಮಾಡುವ ಸಂದರ್ಭವಲ್ಲ. ಯಾರು ರಾಜಕೀಯ ಮಾಡುತ್ತಾರೆ ಎಂಬುದು ಕೂಡ ನನಗೆ ಲೆಕ್ಕವಿಲ್ಲ. ಅವೆಲ್ಲವೂ ಅಸೆಂಬ್ಲಿಯಲ್ಲಿ ಬರುತ್ತವೆ, ಅದಕ್ಕೆ ಅಲ್ಲಿ ಉತ್ತರ ಕೊಡುತ್ತೇನೆ ಎಂದರು.

ನಾವು ಇತರರನ್ನು ಹೊಣೆ ಮಾಡಲ್ಲ. ಇದರಿಂದ ಕರ್ನಾಟಕದ, ಬೆಂಗಳೂರಿನ ಇಮೇಜ್‌ಗೆ ಧಕ್ಕೆಯಾಗಿದೆ. ಇಂಥ ಜನಜಂಗುಳಿ ಯಾರೂ ನಿರೀಕ್ಷಿಸಿರಲಿಲ್ಲ. 18 ವರ್ಷಗಳ ನಂತರ ಕಪ್‌ ಬಂದಿದೆ. ಯುವಜನರ ಮನಸ್ಸಿನಲ್ಲಿ ಏನು ಕುದಿಯುತ್ತಿತ್ತೋ. ಅವರೆಲ್ಲ ಬಂದಿದ್ದಾರೆ. ಕೆಲವು ಕ್ರಮಗಳನ್ನು ಪ್ರಶ್ನಿಸಬಹುದು. ಆದರೆ ಈಗ ಶೋಕದ ಸಮಯ. ಅವರೆಲ್ಲ ನಮ್ಮ ಕುಟುಂಬ ಭಾಗ. ಅವರ ಶೋಕದಲ್ಲಿ ನಾವೂ ಪಾಲ್ಗೊಂಡಿದ್ದೇವೆ. ಸಿಎಂ ಸೇರಿದಂತೆ ನಾವೆಲ್ಲಾ ಶಾಕ್‌ನಲ್ಲಿದ್ದೇವೆ ಎಂದು ಹೇಳಿದರು.

[pj-news-ticker]