Trending

ಎನ್‌ಕೌಂಟರ್‌ನಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಶಾರ್ಪ್‌ ಶೂಟರ್‌ ನವೀನ್‌ ಕುಮಾರ್‌ನ ಹತ್ಯೆ

Spread the love

ಲಖನೌ: ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಶಾರ್ಪ್‌ ಶೂಟರ್‌, ಸುಮಾರು 20ರಷ್ಟು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ನವೀನ್‌ ಕುಮಾರ್‌ ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ ಎಂದು ಉತ್ತರ ಪ್ರದೇಶದ ಹಾಪುರದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಅಪಹರಣ, ದರೋಡೆ ಮುಂತಾದ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಭ್ ಯಶ್ ಮಾತನಾಡಿ, ʼʼಗಾಜಿಯಾಬಾದ್‌ನ ಲೋನಿ ನಿವಾಸಿ ನವೀನ್ ಕುಮಾರ್ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆʼʼ ಎಂದು ಹೇಳಿದ್ದಾರೆ.

ʼʼವಿಶೇಷ ಕಾರ್ಯಪಡೆಯ ನೋಯ್ಡಾ ಘಟಕ ಮತ್ತು ದಿಲ್ಲಿ ಪೊಲೀಸ್‌ ಸ್ಪೆಷಲ್‌ ಘಟಕದ ಜಂಟಿ ತಂಡವು ಕಾರ್ಯಾಚರಣೆ ನಡೆಸಿದ ವೇಳೆ ಸಶಸ್ತ್ರ ಹೊಂದಿದ್ದ ನವೀನ್ ಕುಮಾರ್ ಮತ್ತು ತಂಡ ದಾಳಿ ನಡೆಸಿತು. ಇದರಿಂದ ಸಂಘರ್ಷ ಆರಂಭವಾಯಿತು. ಬಳಿಕ ಗಂಭೀರ ಗಾಯಗೊಂಡಿದ್ದ ನವೀನ್‌ ಹತನಾಗಿದ್ದಾನೆʼʼ ಎಂದು ಅವರು ತಿಳಿಸಿದ್ದಾರೆ.

ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಮತ್ತೊಬ್ಬ ಉನ್ನತ ಲೆಫ್ಟಿನೆಂಟ್ ಹಾಶಿಮ್ ಬಾಬಾನ ಅತ್ಯಂತ ವಿಶ್ವಾಸಾರ್ಹ ಸಹಾಯಕರಲ್ಲಿ ನವೀನ್ ಒಬ್ಬ ಎನಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಈತನ ವಿರುದ್ಧ 2008ರಲ್ಲಿ ಮೊದಲ ಬಾರಿಗೆ ದಿಲ್ಲಿಯ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 2009ರಲ್ಲಿ ಸಾಹಿಬಾಬಾದ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆತನ ಕೈವಾಡ ಇರುವ ಬಗ್ಗೆ ಶಂಕೆ ಮೂಡಿತ್ತು. ವರ್ಷದ ನಂತರ ಉತ್ತರ ಪ್ರದೇಶದಲ್ಲಿ ದರೋಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ದಿಲ್ಲಿಯಲ್ಲಿನ 2 ಪ್ರಕರಣಗಳಲ್ಲಿ ಆತನನ್ನು ದೋಷಿ ಎಂದು ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

[pj-news-ticker]