Trending

ಒಂದು ಕಾರಿನಿಂದ ಇನ್ನೊಂದು ಕಾರಿಗೆ ಸಿಡಿದ ಮಳೆ ನೀರು : ಕೋಪದಲ್ಲಿ ಕೈಬೆರಳು ಕಚ್ಚಿ ತುಂಡರಿಸಿದ ವ್ಯಕ್ತಿ

Spread the love

ಬೆಂಗಳೂರು: ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಬೆವರ ಹನಿ ತಾಕಿದ್ದಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪರ-ವಿರೋಧ ಪ್ರಕರಣ ದಾಖಲಾಗಿದ್ದವು. ಅದೇ ರೀತಿ ಮಾಗಡಿ ರೋಡ್​​ನಲ್ಲಿ ಕಾರಿನಲ್ಲಿ ಬರುವಾಗ ಮಳೆನೀರು ಮತ್ತೊಂದು ಕಾರಿಗೆ ಹಾರಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ವ್ಯಕ್ತಿಯ ಕೈ ಬೆರಳನ್ನು ಕಚ್ಚಿ ತುಂಡರಿಸಿದ ಕುರಿತು ಪ್ರಕರಣ ದಾಖಲಾಗಿದೆ.

ಕಾರಿನಲ್ಲಿ ತೆರಳುವಾಗ ಮಳೆ ನೀರು ಪಕ್ಕದ ಕಾರಿನ ಮೇಲೆ ಹಾರಿದ್ದಕ್ಕೆ ಕೋಪಗೊಂಡು ವ್ಯಕ್ತಿಯ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬಲಗೈ ಬೆರಳು ಕಚ್ಚಿ ತುಂಡು ಮಾಡಿದ್ದಾನೆ ಎಂದು ಆರೋಪಿಸಿ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯಂತ್ ಶೇಖರ್ ಎಂಬವರು ಹಲ್ಲೆಗೊಳಗಾಗಿದ್ದು, ಇವರ ಪತ್ನಿ ಪಾರ್ವತಿ ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಆಗಿದ್ದೇನು?: ಮೇ 25ರಂದು ರಾತ್ರಿ ಖಾಸಗಿ ಹೊಟೇಲ್​​ವೊಂದರಲ್ಲಿ ಊಟ ಮುಗಿಸಿ ಮನೆಗೆ ಹಿಂತಿರುಗಲು ಓಕಳಿಪುರಂ ಅಂಡರ್ ಪಾಸ್ ಬಳಿ ಬರುವಾಗ ಪಕ್ಕದ ಕಾರಿನ ಮೇಲೆ ಅಚಾನಕ್ಕಾಗಿ ಮಳೆ ನೀರು ಹಾರಿದೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸಿ ಜಯಂತ್ ಕ್ಷಮೆ ಕೇಳಿದ್ದರೂ ಅವಾಚ್ಯ ಶಬ್ಧಗಳಿಂದ ಮತ್ತೊಂದು ಕಾರಿನಲ್ಲಿದ್ದ ದಂಪತಿ ನಿಂದಿಸಿದ್ದರು. ಬಳಿಕ ಕಾರು ಹಿಂಬಾಲಿಸಿ ಅಡ್ಡಗಟ್ಟಿ ಕಾರಿನಲ್ಲಿ ಕುಳಿತಿದ್ದ ಪತಿಯನ್ನು ಎಳೆದ ವ್ಯಕ್ತಿ, ತನ್ನ ಕೈಗಳಿಂದ ಎಡಗಣ್ಣಿಗೆ ಗುದ್ದಿ ಹಲ್ಲೆ ಮಾಡಿದ್ದ. ಬಳಿಕ ಬಲಗೈ ಬೆರಳಿಗೆ ಕಚ್ಚಿದ್ದು ಬೆರಳು ತುಂಡಾಗಿದೆ ಎಂದು ದೂರಿನಲ್ಲಿ ಪಾರ್ವತಿ ಆರೋಪಿಸಿದ್ದಾರೆ.

ಘಟನೆ ಸಂಬಂಧ ಹಲ್ಲೆಗೊಳಗಾದ ಶೇಖರ್​​ನನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಡಾದ ಕೈ ಬೆರಳಿಗೆ ಐದು ಹೋಲಿಗೆ ಹಾಕಿ ಆರು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಆರೋಪಿತ ದಂಪತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮಹಿಳೆ ತಿಳಿಸಿದ್ಧಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶೇಖರ್, ”ಮೇ 25ರಂದು ಶೇಷಾದ್ರಿಪುರಂ ಹೊಟೇಲ್​​ವೊಂದರಲ್ಲಿ ಊಟ ಮುಗಿಸಿ ವಾಪಸ್ ಬರುವಾಗ ಮಾರ್ಗಮಧ್ಯೆ ಮಳೆ ಬರುವಾಗ ಮಳೆನೀರು ಆರೋಪಿಯ ಕಾರಿನಲ್ಲಿದ್ದ ಮಹಿಳೆಯ ಮುಖಕ್ಕೆ ಹಾರಿದೆ. ಅವರ ಪತಿ ಸ್ಟೀಡ್ ಆಗಿ ಯಾಕೆ ಹೋಗುತ್ತೀಯಾ ಅಂದರು. ಈ ವೇಳೆ ನಾನು ಅವರಿಗೆ ಕ್ಷಮೆ ಕೇಳಿ ಕಾರಿಗೆ ಗ್ಲಾಸ್ ಹಾಕಿಕೊಳ್ಳಿ ಎಂದು ಸೂಚಿಸಿ ತೆರಳಿದೆ. ಆದರೆ ಅವರು ಮುಂದೆ ತಮ್ಮ ಕಾರನ್ನು ಹಿಂಬಾಲಿಸಿ ಕಾರನ್ನ ಅಡ್ಡಗಟ್ಟಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದರು. ಕಾರಿನಲ್ಲಿದ್ದ ವ್ಯಕ್ತಿ ಏಕಾಏಕಿ ನನ್ನ ಕೆನ್ನೆಗೆ ಹೊಡೆದ. ಪ್ರತಿರೋಧವಾಗಿ ನಾನು ಆತನ ಕೆನ್ನೆಗೆ ಹೊಡೆದು ಆತನ ಕುತ್ತಿಗೆಪಟ್ಟಿ ಹಿಡಿದಿದ್ದಾಗ ಆಗ ಆತ ನನ್ನ ಕೈ ಕಚ್ಚಿ ಗಾಯಪಡಿಸಿದ್ದಾನೆ. ಈ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ನೀಡಿದರೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

[pj-news-ticker]