Trending

ನೀಟ್‌ ಪರೀಕ್ಷೆ ವೇಳೆ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳು : ಕಲಬುರಗಿಯಲ್ಲಿ ಎಡವಟ್ಟು

Spread the love

ಕಲಬುರಗಿ: ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ  ತೆಗೆಸಿದ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ದೇಶೀಯ ಮಟ್ಟದಲ್ಲಿ ಈ ಸುದ್ದಿ ಸದ್ದು ಮಾಡಿತ್ತು. ಈ ಬಗ್ಗೆ ಚರ್ಚೆ ನಡೆಯುತ್ತಿವ ಮಧ್ಯೆಯೇ ರಾಜ್ಯದಲ್ಲಿ ಮತ್ತೊಂದು ಎಡವಟ್ಟು ಸಂಭವಿಸಿದೆ.

ಭಾನುವಾರ (ಮೇ 4) ನಡೆದ ನೀಟ್ ಪರೀಕ್ಷೆಯಲ್ಲೂ  ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದಾರೆ. ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ ನೀಟ್​ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್‌ ಅವರ ಜನಿವಾರವನ್ನು ಅಧಿಕಾರಿಗಳು ತೆಗೆಸಿ, ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಸದ್ಯ ಈ ವಿಚಾರ ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದೆ.

ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಶ್ರೀಪಾದ್ ಪಾಟೀಲ್​ ಅವರಿಗೆ ಜನಿವಾರ ತೆಗೆಯುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅದರಂತೆ ಶ್ರೀಪಾದ್ ಪಾಟೀಲ್‌ ಜನಿವಾರ ತೆಗೆದು ಪರೀಕ್ಷೆ ಬರೆದಿದ್ದಾರೆ. ಈ ಸುದ್ದಿ ಕೂಡಲೇ ಎಲ್ಲಡೆ ಹರಡಿದ್ದು, ಪರೀಕ್ಷಾ ಕೇಂದ್ರದ ‌ಮುಂದೆ ಬ್ರಾಹ್ಮಣ ಸಮಾಜ ಪ್ರತಿಭಟನೆ ನಡೆಸಿತು. ಜನಿವಾರ ತೆಗೆಸಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿತು.

ಇತ್ತೀಚೆಗೆ ಸಚಿವ ವಿ.ಸೋಮಣ್ಣ ಅವರು ರೈಲ್ವೆ ಪರೀಕ್ಷೆಯ ವೇಳೆ ಜನಿವಾರ, ಕಾಲುಂಗುರ ಮತ್ತು ಮಾಂಗಲ್ಯ ಸರವನ್ನು ತೆಗೆಸುವಂತಿಲ್ಲ ಎಂದು ಸೂಚನೆ ನೀಡಿದ್ದರು. ಹಾಗಿದ್ದರೂ ಅಧಿಕಾರಿಗಳು ಜನಿವಾರ ತೆಗೆಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿ ಸಾಕಷ್ಟು ರಾದ್ದಾಂತ ನಡೆದರೂ ಈಗ ಮತ್ತೆ ಅದನ್ನು ಪುನರಾವರ್ತನೆಗೊಳಿಸಿರುವುದು ಉದ್ದೇಶ ಪೂರ್ವಕ ನಡೆಯೇ ಎನ್ನುವ ಅನುಮಾನ ಮೂಡಿಸಿದೆ. ಬ್ರಾಹ್ಮಣ ಸಮುದಾಯದವರ ತಾಳ್ಮೆ ಪರೀಕ್ಷಿಸಬೇಡಿ. ಜನಿವಾರ ತೆಗೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

[pj-news-ticker]