ವಿಜಯನಗರ : ಈರುಳ್ಳಿ ಬೆಲೆ ಕುಸಿತದಿಂದ ಬೇಸತ್ತ ರೈತರೊಬ್ಬರು ಕಟಾವು ಹಂತದ ಈರುಳ್ಳಿ ಫಸಲು ಇರುವ ತಮ್ಮ ಮೂರು ಎಕರೆ ಹೊಲವನ್ನು ಕುರಿ ಮೇಯಿಸಿ ನಾಶಪಡಿಸಿದ್ದಾರೆ. ಹಡಗಲಿ ತಾಲೂಕಿನ ಉತ್ತಂಗಿಯ ರೈತ ಮೂಲಿಮನಿ ಶರಣಪ್ಪ ಕುರಿ ಮೇಯಿಸಿ ನಾಶಪಡಿಸಿದ ರೈತ.
ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ₹1,000 ದಿಂದ ₹800ರಷ್ಟು ಮಾತ್ರ ಇದೆ. ಈರುಳ್ಳಿ ಕಿತ್ತು, ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ಸಾಗಿಸಲು 50 ಕೆಜಿಯ ಪ್ರತಿ ಪಾಕಿಟ್‌ಗೆ ₹300ರಿಂದ ₹400 ಖರ್ಚು ತಗುಲುತ್ತದೆ. ಕಟಾವು, ಆಳುಗಳ ಖರ್ಚು, ಸಾಗಣೆ ವೆಚ್ಚದ ಹಣವೂ ಮರಳಿ ಬರುವುದಿಲ್ಲ ಎಂದು ರೈತ ಮೂಲಿಮನಿ ಶರಣಪ್ಪ ಕುರಿ ಮೇಯಿಸಿ ಬೆಳೆ ನಾಶಪಡಿಸಿದ್ದಾರೆ.
”ಮೂರು ಎಕರೆಯಲ್ಲಿ ಈರುಳ್ಳಿ ಬೆಳೆ ಬೆಳೆಯಲು ಸುಮಾರು ₹1.20 ಲಕ್ಷ ಖರ್ಚು ಮಾಡಿರುವೆ. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ಮಾರಾಟದಿಂದ ಬಂದ ಹಣ ಕಟಾವು ಖರ್ಚಿಗೂ ಸಾಲುವುದಿಲ್ಲ. ಅದರ ಬದಲು ನಾಶ ಮಾಡುವುದೇ ಒಳ್ಳೆಯದು ಅಂತ ತಿಳಿದು ಹೀಗೆ ಮಾಡಿರುವೆ. ಉತ್ತಮ ಆದಾಯ ನಿರೀಕ್ಷಿಸಿ ಸುಮಾರು ನಾಲ್ಕು ತಿಂಗಳ ಹಿಂದೆಯಷ್ಟೇ ಈರುಳ್ಳಿ ಬೆಳೆ ಹಾಕಿದ್ದೆ. ಈರುಳ್ಳಿ ಬೆಲೆ ಕುಸಿದಿದ್ದು, ಸರ್ಕಾರ ಯಾವುದೇ ರೀತಿಯಿಂದ ಎಚ್ಚೆತ್ತುಕೊಂಡಿಲ್ಲ. ರೈತರ ಪರಿಸ್ಥಿತಿ ಹೇಗಿದೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರ” ಎಂದು ರೈತ ಶರಣಪ್ಪ ಬೇಸರ ಹೊರಹಾಕಿದ್ದಾರೆ.
