Trending

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ : ಲಾರಿ ಚಾಲಕನ ಬಂಧನ

Spread the love

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತ ಪ್ರಕರಣದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಲಾರಿ ಚಾಲಕನನ್ನು ಬಂಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ‌.

ಸಂಕ್ರಾಂತಿಯ ಹಬ್ಬದ ದಿನವೇ ಚನ್ನಮ್ಮನ ಕಿತ್ತೂರು ‌ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜ.14ರಂದು ಅಪಘಾತ ಸಂಭವಿಸಿತ್ತು. ಲಾರಿ ಚಾಲಕ ಹಿಟ್ ಆಂಡ್ ರನ್ ಮಾಡಿ ಪರಾರಿಯಾಗಿದ್ದ. ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಗಾಯವಾಗಿ, ಆಸ್ಪತ್ರೆಗೆ ದಾಖಲಾಗಿದ್ದರು.

ಲಾರಿ ಚಾಲಕನ ವಿರುದ್ಧ ಕಿತ್ತೂರು ಠಾಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಚಾಲಕ ಶಿವಪ್ರಸಾದ ಜಿ. ಅವರು ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿದ್ದರು. ಲಾರಿಯ ಬಣ್ಣ ಸೇರಿ ಸ್ಥಳದಲ್ಲಿ ಸಿಕ್ಕ ಸಾಕ್ಷಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ರವಾನಿಸಿದ್ದರು. ಹಿರೇಬಾಗೇವಾಡಿ ಟೋಲ್ ನಾಕಾ ಮತ್ತು ಹರಿಯಾಣ ಧಾಬಾದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಲಾರಿ ಪತ್ತೆ ಹಚ್ಚಿದ್ದ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

ಬಂಧಿತ ಚಾಲಕನನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ತಕ್ರಾರವಾಡಿ ಗ್ರಾಮದ ನಿವಾಸಿ ಮಧುಕರ್ ಕೊಂಡಿರಾಮ ಸೋಮವಂಶ(65) ಎಂದು ಗುರುತಿಸಲಾಗಿದೆ. ಅಲ್ಲದೇ ಅಪಘಾತ ಎಸಗಿದ ವಾಹನವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ವಾಹನಗಳ ಪರಿಶೀಲನಾ ವರದಿ ಮತ್ತು ಘಟನೆಯ ದಿನದ ಮೊಬೈಲ್ ಕರೆ ದಾಖಲಾತಿಗಳ ಆಧಾರದ ಮೇಲೆ ಆರೋಪಿಯು ಅಪಘಾತದಲ್ಲಿ ಭಾಗಿಯಾದ ಕುರಿತು ಖಚಿತಪಡಿಸಿಕೊಂಡು ಆತನನ್ನು ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ಆರೋಪಿಗೆ ಜಾಮೀನು ಕೂಡ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

[pj-news-ticker]