ಮುಂಬಯಿ: ಭಾರತ ತಂಡದ ಮಾಜಿ ವೇಗಿ ಜಹೀರ್ ಖಾನ್ ತಂದೆಯಾದ ಸಂತಸದಲ್ಲಿದ್ದಾರೆ. ಪತ್ನಿ ಸಾಗರಿಕಾ ಘಾಟ್ಗೆ ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಸಾಗರಿಕಾ ಘಾಟ್ಗೆ ಸಾಮಾಜಿಕ ಜಾಲತಾಣದಲ್ಲಿ ಪತಿ ಮತ್ತು ಮಗುವಿನ ಫೋಟೊವೊಂದನ್ನು ಹಂಚಿಕೊಂಡು ಪ್ರಕಟಿಸಿದ್ದಾರೆ.
ಮಗನಿಗೆ ಫತೇಸಿನ್ಹ್ ಖಾನ್ (Fatehsinh Khan) ಎಂದು ಹೆಸರಿಡಲಾಗಿದೆ. ʼಫತೇಹ್ʼ ಎಂದರೆ ವಿಜಯಶಾಲಿ ಎಂದು ಅರ್ಥ. ಸಾಗರಿಕಾ ಘಾಟ್ಗೆ ರಜಪೂತ ವಂಶಸ್ಥರಾಗಿದ್ದು, ಹೀಗಾಗಿ ಮಗುವಿನ ಹೆಸರಿನಲ್ಲಿ ಸಿನ್ಹ್ ಸೇರಿಸಲಾಗಿದೆ.
“ಪ್ರೀತಿ, ಕೃತಜ್ಞತೆ ಮತ್ತು ದೈವಿಕ ಆಶೀರ್ವಾದಗಳೊಂದಿಗೆ ನಾವು ನಮ್ಮ ಪುಟ್ಟ ಗಂಡು ಮಗು ಫತೇಸಿನ್ ಖಾನ್ನನ್ನು ಈ ಜಗತ್ತಿಗೆ ಸ್ವಾಗತಿಸುತ್ತೇವೆ” ಎಂದು ಸಾಗರಿಕಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ಜಹೀರ್ ಖಾನ್ 2017ರಲ್ಲಿ ವಿವಾಹವಾಗಿದ್ದರು. ಸಾಗರಿಕಾ ಅವರು ‘ಚಕ್ ದೇ ಇಂಡಿಯಾ’ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. ಅದಕ್ಕೂ ಮುನ್ನ ಅವರು ಭಾರತೀಯ ಹಾಕಿ ತಂಡದಲ್ಲಿ ಆಡಿದ್ದರು. ಮುಂದೆ ಬಾಲಿವುಡ್ನಲ್ಲಿ ಸಾಗರಿಕಾ ಹೆಸರು ಮಾಡಿದರು. ಇದೇ ವೇಳೆ ಜಹೀರ್ ನಡುವೆ ಪ್ರೀತಿ ಬೆಳೆದಿತ್ತು.
46 ವರ್ಷದ ಭಾರತೀಯ ಕ್ರಿಕೆಟ್ನ ಎಡಗೈ ವೇಗಿ, ಜಹೀರ್ ಖಾನ್ 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಸದ್ಯ ಐಪಿಎಲ್ನಲ್ಲಿ ಲಕ್ನೋ ತಂಡದ ಮೆಂಟರ್ ಮತ್ತು ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆಯಾದ ಜಹೀರ್ ಖಾನ್ಗೆ ಲಕ್ನೋ ಫ್ರಾಂಚೈಸಿ ಶುಭ ಹಾರೈಸಿದೆ.
ಜಹೀರ್ ಖಾನ್ ಮುಸ್ಲಿಂ ಸಮುದಾಯದವರಾಗಿದ್ದರೂ ಹಿಂದುಗಳ ಹಬ್ಬವನ್ನು ಕೂಡ ಪತ್ನಿ ಜತೆ ಆಚರಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ಅವರ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ಆಗಾಗ ಟೀಕೆಗಳನ್ನು ದ್ವೇಷಪೂರಿತ ಕಾಮೆಂಟ್ಗಳ ಮೂಲಕ ನಿಂದನೆ ಮಾಡುತ್ತಿರುತ್ತಾರೆ.
