ಬೆಂಗಳೂರು : ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಯತ್ನಾಳ್ಗೆ ಈ ಉಚ್ಛಾಟನೆ ಶಿಕ್ಷೆ ಹೊಸದೇನಲ್ಲ. ಈ ಹಿಂದೆಯೂ ಇದೇ ಬಿಜೆಪಿಯಿಂದ ಎರಡು ಬಾರಿ ಉಚ್ಛಾಟನೆಗೊಂಡಿದ್ದಾರೆ. ಇದು ಮೂರನೇ ಬಾರಿ.
2009 ರಲ್ಲಿ ಮೊದಲ ಬಾರಿಗೆ ಉಚ್ಛಾಟನೆ
2009 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಅಮಾನತ್ತಾಗಿದ್ದರು. ಯಡಿಯೂರಪ್ಪ, ಶೋಬಾ ಕರಂದ್ಲಾಜೆ ಸದಾನಂದಗೌಡ ವಿರುದ್ದ ಮಾತನಾಡಿ 6 ವರ್ಷಗಳ ಕಾಲ ಪಕ್ಷದಿಂದ ಅಮಾನತ್ತು ಶಿಕ್ಷೆಗೆ ಒಳಗಾಗಿದ್ದರು. ನಂತರ ಜೆಡಿಎಸ್ ಪಕ್ಷ ಸೇರಿ 2013 ರಲ್ಲಿ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಕಂಡಿದ್ದರು. ಬಳಿಕ 2014 ರಲ್ಲಿ ಯತ್ನಾಳ್ ಮೇಲಿನ ಅಮಾನತ್ತು ಶಿಕ್ಷೆ ರದ್ದು ಮಾಡಿ ಪಕ್ಷಕ್ಕೆ ಕರೆತರಲಾಯ್ತು. ಆ ವೇಳೆ ಯಡಿಯೂರಪ್ಪ ಬಿಜೆಪಿಯಲ್ಲಿರಲಿಲ್ಲ.
2016ರಲ್ಲಿ 2ನೇ ಬಾರಿ ಯತ್ನಾಳ್ ಉಚ್ಚಾಟನೆ
ಇನ್ನು 2014 ರ ಲೋಕಸಭಾ ಚುನಾವಣೆ ಬಳಿಕ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಸಿಗದ ಕಾರಣ 2016ರಲ್ಲಿ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದೇ ಕಾರಣ ಮತ್ತೆ 2016ರಲ್ಲಿ 6 ವರ್ಷಗಳ ಕಾಲ ಎರಡನೇ ಬಾರಿ ಯತ್ನಾಳ್ ಉಚ್ಚಾಟನೆ ಶಿಕ್ಷೆಗೆ ಗುರಿಯಾಗಿದ್ದರು. ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದು ವಿಧಾನಪರಿಷತ್ ಆಯ್ಕೆಯಾಗಿ ಹೈಕಮಾಂಡ್ಗೆ ತಮ್ಮ ಶಕ್ತಿ ತೋರಿಸಿದ್ದರು. ನಂತರ 2018 ರಲ್ಲಿ ಕೇಂದ್ರದ ವರಿಷ್ಟರು ಹಾಗೂ ಯಡಿಯೂರಪ್ಪ ಸೇರಿಕೊಂಡು ಯತ್ನಾಳ್ ವಿರುದ್ಧ ಅಮಾನತ್ತು ಶಿಕ್ಷೆ ರದ್ದು ಮಾಡಿ ವಾಪಸ್ ಬಿಜೆಪಿಗೆ ಕರೆ ತಂದರು. ಬಳಿಕ 2018 ರಲ್ಲಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಅಲ್ಲಿಂದ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಸಮರ ಸಾರಲು ಶುರು ಮಾಡಿದರು.
ಯತ್ನಾಳ್ ಅಮಾನತುಗೊಂಡಿರುವುದು ಇದು 3ನೇ ಬಾರಿ
ಕರ್ನಾಟಕ ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮಸಿದ ಹೈಕಮಾಂಡ್ ನಾಯಕರು, ರೆಬೆಲ್ ತಂಡದ ನಾಯಕ ಯತ್ನಾಳ್ ಅವರನ್ನೇ ಸೈಲೆಂಟ್ ಮಾಡಿಸಿದ್ರೆ ಉಳಿದವರು ತೆಪ್ಪಗಿರುವುತ್ತಾರೆಂದು ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು. ಇದಕ್ಕೆ ಯತ್ನಾಳ್ ಸಹ ಉತ್ತರಿಸಿ ಮತ್ತದೇ ತಮ್ಮ ರೆಬೆಲ್ ನಾಯಕರ ಜೊತೆ ಗೌಪ್ಯ ಸಭೆ ನಡೆಸುಕೊಂಡು ಬಂದಿದ್ದಾರೆ. ಹೀಗಾಗಿ ಅಂತಿಮವಾಗಿ ಹೈಕಮಾಂಡ್ ರೆಬೆಲ್ ತಂಡದ ಕ್ಯಾಪ್ಟನನ್ನೇ ಉಚ್ಛಾಟಿಸಿದರೆ ಉಳಿದವರು ಸಹಜವಾಗಿಯೇ ಗಪ್ ಚುಪ್ ಆಗುತ್ತಾರೆ ಎಂದು ತಿಳಿದು ಈ ತೀರ್ಮಾನ ತೆಗೆದುಕೊಂಡಿದೆ. ಇದರೊಂದಿಗೆ ಯತ್ನಾಳ್ ಬಿಜೆಪಿಯಿಂದ ಮೂರನೇ ಬಾರಿಗೆ ಉಚ್ಛಾಟನೆಯಾಗಿದ್ದಾರೆ.
ಈ ಹಿಂದೆ ಯತ್ನಾಳ್ ವಿರುದ್ಧದ ಅಮಾನತು ವಾಪಸ್ ಪಡೆದುಕೊಂಡು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಅದರಂತೆ ಮುಂದಿನ ದಿನಗಳಲ್ಲಿ ಯತ್ನಾಳ್ ವಿರುದ್ಧದ ಸಸ್ಪೆಂಡ್ ಆದೇಶ ವಾಪಸ್ ಪಡೆದುಕೊಂಡಡು ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ಇದು ರಾಜಕೀಯ. ಯಾವ ಸಂದರ್ಭದಲ್ಲಿ ಏನು ಆಗುತ್ತೋ ಗೊತ್ತಾಗಲ್ಲ .
