ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದ ಬಿಜೆಪಿ ಸದಸ್ಯರು ಇಂದು ವಿಧಾನಸಭೆಯ ಬಾವಿಗಿಳಿದು, ಬಜೆಟ್ ಹಾಗೂ ಮಸೂದೆಗಳ ಪ್ರತಿಗಳನ್ನು ಹರಿದು ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ-ಜೆಡಿಎಸ್ ಶಾಸಕರ ಧರಣಿ ನಡುವೆ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದರು. ಈ ವೇಳೆ ಪ್ರತಿಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸ್ಪೀಕರ್ ಪೀಠದ ಬಳಿ ಬಂದ ಬಿಜೆಪಿ ಶಾಸಕರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಷ್ಟರಲ್ಲೇ ಮಾರ್ಷಲ್ಗಳು ಸ್ಪೀಕರ್ ಅವರಿಗೆ ಸುತ್ತುವರಿದು ಬಿಜೆಪಿ ಶಾಸಕರನ್ನು ತಡೆದರು. ಆದರೂ ಮಸೂದೆಗಳ ಪ್ರತಿಗಳನ್ನು ಹರಿದು ಶಾಸಕರು ಎಸೆಯುತ್ತಲೇ ಇದ್ದರು.
ಈ ನಡುವೆ 2025ನೇ ಸಾಲಿನ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ (ತಿದ್ದುಪಡಿ) ವಿಧೇಯಕ ಹಾಗೂ ಧನ ವಿನಿಯೋಗ ವಿಧೇಯಕ ಹಾಗೂ ಶಾಸಕರ ಸಂಬಳದ ವಿಧೇಯಕಗಳಿಗೆ ಸದನದಲ್ಲಿ ಅಂಗೀಕಾರ ದೊರೆಯಿತು. ಈ ಮಧ್ಯೆ ಗಲಾಟೆ ಜೋರಾಗುತ್ತಿದ್ದಂತೆಯೇ ಸದನವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು.
