Trending

ಸಿ.ಟಿ.ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ

Spread the love

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪದ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಇಂದು ಆದೇಶಿಸಿದೆ.

ಜಾಮೀನು ಕೋರಿ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಯಮಾ ಅವರಿದ್ದ ಪೀಠ ಈ ಆದೇಶ ಮಾಡಿತು.

ವಿಧಾನಮಂಡಲ ಕಲಾಪದಲ್ಲಿ ನಡೆದಿರುವ ಘಟನೆ ಇದು. ಈ ಕುರಿತಂತೆ ಜೆಎಂಎಫ್‌ಸಿ ನ್ಯಾಯಾಲಯದ ದೃಢೀಕೃತ ಪ್ರತಿ ಇಲ್ಲದಿದ್ದರೂ ಜಾಮೀನು ಮಂಜೂರು ಮಾಡಬಹುದು. ಇದೊಂದು ವ್ಯಕ್ತಿ ಸ್ವಾತಂತ್ರ್ಯ ಕುರಿತ ಪ್ರಕರಣವಾಗಿದೆ.‌ ಇದೇ ರೀತಿಯ ಆರೋಪದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವ ಉದಾಹರಣೆ ಇದೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು. ಅಲ್ಲದೆ, ಸದನದಲ್ಲಿ ಮಾತನಾಡಿರುವ ಕುರಿತ ಸಂಬಂಧ ದೃಢೀಕರಣ ಮಾಡಿರುವ ದಾಖಲೆಗಳಿಲ್ಲ. ಹೀಗಾಗಿ ಜಾಮೀನು ಕೊಡಬಹುದು ಎಂದು ನ್ಯಾಯಪೀಠಕ್ಕೆ ಸಿ.ಟಿ.ರವಿ ಪರ ವಕೀಲರು ಮನವಿ ಮಾಡಿದರು.

ಆರೋಪಿ‌ ಅಸಾಂವಿಧಾನಿಕ ಪದ ಬಳಕೆ ಮಾಡಿದ್ದಾರೆ. ಒಂದೇ ಪದವನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಸದನದಲ್ಲಿ ಮಾತನಾಡಿದ ಪದಗಳನ್ನು ಪ್ರಶ್ನೆ ಮಾಡಬಾರದು ಎಂದರೆ ಏನು ಬೇಕಾದರೂ ಮಾತನಾಡಬಹುದಾ? ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ಬಾಕಿಯಿದೆ. ಇದೀಗ ಮತ್ತೊಂದು ಜಾಮೀನು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಸಲು‌ ಸಾಧ್ಯವಿಲ್ಲ.‌ ಹೀಗಾಗಿ ಸಿ.ಟಿ.ರವಿ ಅವರಿಗೆ ಜಾಮೀನು ನೀಡಬಾರದು ಎಂದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರ ವಕೀಲ‌ ಶ್ಯಾಮ್ ಸುಂದರ್ ವಾದ ಮಂಡಿಸಿದರು.

[pj-news-ticker]