ಬೆಳಗಾವಿ : ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿಯ ಸುವರ್ಣ ಸೌಧದ ಮೊಗಸಾಲೆಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ವಿಧಾನಪರಿಷತ್ನ ಕಾರಿಡಾರ್ನಲ್ಲಿ ಹೋಗುತ್ತಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಗಲಿಗರು ಏಕಾಏಕಿ ಸಿಟಿ ರವಿಗೆ ಅಡ್ಡ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ನೂರಾರು ಬೆಂಬಲಿಗರು ಘೋಷಣೆ ಕೂಗಿ ಸಿಟಿ ರವಿ ಮೇಲೆ ಮುಗಿಬಿದ್ದಿದ್ದು, ಹಲ್ಲೆಗೆ ಯತ್ನ ನಡೆದಿದೆ ಎಂದು ತಿಳಿದುಬಂದಿದೆ.
ಕೂಡಲೇ ಮಾರ್ಷಲ್ಗಳು, ಕಾರಿಡಾರ್ ಗೇಟ್ ಬಂದ್ ಮಾಡಿದರು. ಹೀಗಾಗಿ ಸಿಟಿ ರವಿ ಅಪಾಯದಿಂದ ಪಾರಾಗಿದ್ದಾರೆ.
ಏಕವಚನದಲ್ಲೇ ಏನೋ ಸೂ….ಮಗನೇ…. ನಮ್ಮಕ್ಕನಿಗೆ ಹೀಗಂದ್ಯಾ ಎಂದು ಓರ್ವ ವ್ಯಕ್ತಿ ಒದೆಯುವ ರೀತಿಯಲ್ಲಿ ಕಾಲೆತ್ತಿದ್ದಾನೆ. ಆಗ ಏನೋ ಎಂದ ರವಿ ಪ್ರಶ್ನಿಸಿದ್ದಾರೆ. ಆಗ ಸಿಟಿ ರವಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದರಿಂದ ದೊಡ್ಡ ಗಲಾಟೆ ಉಂಟಾಗಿದ್ದು, ಕೂಡಲೇ ಪೊಲೀಸರು ದೌಡಾಯಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರನ್ನು ಚದುರಿಸಿದರು. ಅಲ್ಲದೇ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರ ನಡೆಯಿಂದ ಆಕ್ರೋಶಗೊಂಡಿರುವ ಸಿಟಿ ರವಿ, ನನ್ನ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕೆಂದು ಧರಣಿ ಕುಳಿತುಕೊಂಡಿದ್ದಾರೆ.
ಸಿಟಿ ರವಿ ಆಕ್ರೋಶ
ನಾನು ಇದಕ್ಕೆಲ್ಲ ಹೆದರಿಕೊಂಡು ರಾಜಕಾರಣ ಮಾಡುವವನಲ್ಲ. ನಾನು ಏಕಾಂಗಿಯಾಗಿಯೇ ಎಲ್ಲವನ್ನೂ ಎದುರಿಸುತ್ತೇನೆ. ನನ್ನ ಕೊಲೆ ಮಾಡುವುದಕ್ಕೆ ಸಂಚು ರೂಪಿಸಿಕೊಂಡು ಬಂದಿದ್ದಾರೆ. ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ ಸಿಟಿ ರವಿ, ನಾನು ಆ ರೀತಿ ಪದಬಳಕೆ ಮಾಡಿದ್ದನ್ನ ತೋರಿಸಿ ಎಂದು ಸವಾಲು ಹಾಕಿದರು.
ಸುವರ್ಣಸೌಧದಲ್ಲೇ ಇಂತಹ ಸ್ಥಿತಿ ಇದೆ ಎಂದರೆ ಅರ್ಥಮಾಡಿಕೊಳ್ಳಿ. ಶಾಸಕನಿಗೆ ರಕ್ಷಣೆ ಇಲ್ಲ ಅಂದರೆ, ಜನಸಾಮಾನ್ಯರ ಸ್ಥಿತಿ ಹೇಗಿದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಾಣಂತಿಯರ ಸಾವು, ವಕ್ಫ್ ವಿಚಾರ ಡೈವರ್ಟ್ ಮಾಡಲು ಯತ್ನ. ಸರ್ಕಾರದ ಕುಮ್ಮಕ್ಕಿನಿಂದಲೇ ನಮ್ಮ ಮೇಲೆ ದಾಳಿ ನಡೆದಿದೆ ಎಂದು ಕಿಡಿಕಾರಿದರು.
