Trending

ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಇನ್ಮುಂದೆ ‘ಪ್ರಜಾ ಸೇವಾ ಕೇಂದ್ರ’

Spread the love

ಬೆಂಗಳೂರು : ರಾಜ್ಯದಾದ್ಯಂತ ವಿವಿಧ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗರಿಕ ಸೇವಾ ಕೇಂದ್ರಗಳಿಗೆ ರಾಜ್ಯ ಸರ್ಕಾರ ಹೊಸ ಹೆಸರನ್ನು ಘೋಷಿಸಿದೆ. ಇನ್ಮುಂದೆ ಬೆಂಗಳೂರು ಒನ್‌, ಕರ್ನಾಟಕ ಒನ್‌ ಮತ್ತು ಗ್ರಾಮ ಒನ್‌ ಕೇಂದ್ರಗಳನ್ನು ‘ಪ್ರಜಾ ಸೇವಾ ಕೇಂದ್ರ’ ಎಂದು ಕರೆಯಲಾಗುವುದು.

ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದಡಿ ಬೆಂಗಳೂರು ನಗರದಲ್ಲಿ ಬೆಂಗಳೂರು ಒನ್‌, ಇತರೆ ನಗರ ಹಾಗೂ ಪಟ್ಟಣಗಳಲ್ಲಿ ಕರ್ನಾಟಕ ಒನ್‌ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಒನ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು.

ಆದರೆ ರಾಜ್ಯದ ವಿವಿಧ ಭಾಗಗಳಲ್ಲಿ ಈ ಕೇಂದ್ರಗಳು ಬೇರೆ ಬೇರೆ ಹೆಸರುಗಳಿಂದ ಗುರುತಿಸಲ್ಪಡುತ್ತಿದ್ದ ಹಿನ್ನೆಲೆಯಲ್ಲಿ ಸೇವಾ ವಿತರಣೆಯಲ್ಲಿ ಏಕರೂಪತೆ ತರುವ ಉದ್ದೇಶದಿಂದ ಮುಖ್ಯಮಂತ್ರಿ ಅವರ ಸೂಚನೆಯಂತೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

2026ರ ನವೆಂಬರ್‌ 18ರಿಂದಲೇ ಈ ಮರುನಾಮಕರಣ ಜಾರಿಗೆ ಬಂದಿದ್ದು, ರಾಜ್ಯದ ಎಲ್ಲಾ ಕೇಂದ್ರಗಳ ಅಧಿಕೃತ ಪತ್ರ ವ್ಯವಹಾರ, ನಾಮಫಲಕ, ವೆಬ್‌ ಪೋರ್ಟಲ್‌, ತಂತ್ರಾಂಶ, ರಸೀದಿ ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ ಇನ್ಮುಂದೆ ಪ್ರಜಾ ಸೇವಾ ಕೇಂದ್ರ ಎಂಬ ಹೆಸರನ್ನೇ ಬಳಸುವಂತೆ ಸೂಚಿಸಲಾಗಿದೆ.

ಅಲ್ಲದೆ, ರಾಜ್ಯದ ಎಲ್ಲಾ ಕೇಂದ್ರಗಳಿಗೆ ಏಕರೂಪದ ಬ್ರಾಂಡಿಂಗ್‌, ನಾಮಫಲಕದ ವಿನ್ಯಾಸ, ಲಾಂಛನ ಮತ್ತು ಬಣ್ಣದ ವಿನ್ಯಾಸ ರೂಪಿಸಿ ಸರ್ಕಾರದ ಅನುಮೋದನೆ ಪಡೆಯುವಂತೆ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ನಿರ್ದೇಶಕರಿಗೆ ಆದೇಶಿಸಲಾಗಿದೆ.

[pj-news-ticker]