ಚೆನ್ನೈ: ತಮಿಳುನಾಡಿನ ಮಧುರೈನಲ್ಲಿ ಭಾರಿ ಸಂಚಲನ ಮೂಡಿಸಿದ್ದ ₹15 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ತನಿಷ್ಕ್ ಚಿನ್ನದ ಮಳಿಗೆಯಿಂದ ಸುಮಾರು 11 ಕೆ.ಜಿ. ಚಿನ್ನ ಹಾಗೂ ವಜ್ರದ ಆಭರಣಗಳನ್ನು ಕಳವು ಮಾಡಿದ್ದ ಆರೋಪದ ಮೇಲೆ ಯೂಟ್ಯೂಬರ್ ನಿಶಾಂತ್ನನ್ನು ಪೊಲೀಸರು ಧರ್ಮಪುರಿಯಲ್ಲಿ ಬಂಧಿಸಿದ್ದಾರೆ.
ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಆತನ ಪ್ರೇಯಸಿ ಹಾಗೂ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ ಮೀನಾಕ್ಷಿ ಮತ್ತು ತಂದೆ ಸುರೇಶ್ ಅವರನ್ನೂ ವಶಕ್ಕೆ ಪಡೆಯಲಾಗಿದೆ.
ನವೆಂಬರ್ 12ರಂದು ಮಧುರೈ ಬೈಪಾಸ್ ರಸ್ತೆಯಲ್ಲಿರುವ ತನಿಷ್ಕ್ ಚಿನ್ನದ ಶೋರೂಂನಲ್ಲಿ ಈ ಬೃಹತ್ ಕಳವು ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಶೋರೂಂನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮುಖಕ್ಕೆ ಮುಸುಕು ಧರಿಸಿದ್ದ ಕಳ್ಳನ ಎಡಗೈ ಮೇಲಿದ್ದ ವಿಶೇಷ ಟ್ಯಾಟೂ ಪೊಲೀಸರಿಗೆ ಪ್ರಮುಖ ಸುಳಿವಾಗಿತ್ತು.
ಈ ಗುರುತಿನ ಆಧಾರದ ಮೇಲೆ ಸ್ಥಳೀಯ ಟ್ಯಾಟೂ ಸ್ಟುಡಿಯೋಗಳು ಹಾಗೂ ಸಾಮಾಜಿಕ ಜಾಲತಾಣದ ಖಾತೆಗಳನ್ನು ಪರಿಶೀಲಿಸಿದ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿರುವುದು ಯೂಟ್ಯೂಬರ್ ನಿಶಾಂತ್ ಎಂಬುದನ್ನು ಪತ್ತೆಹಚ್ಚಿದ್ದಾರೆ.
ಟ್ಯಾಟೂ ಗುರುತಿನಿಂದ ಸಿಕ್ಕಿಬಿದ್ದ ಆರೋಪಿ
ದರೋಡೆ ಬಳಿಕ ನಿಶಾಂತ್ ಮತ್ತು ಆತನ ತಂದೆ ಮಾಸ್ಕ್ ಹಾಗೂ ಕೈಗವಸುಗಳನ್ನು ಸುಡುತ್ತಿದ್ದುದನ್ನು ಪ್ರತ್ಯಕ್ಷದರ್ಶಿಯೊಬ್ಬರು ಗಮನಿಸಿದ್ದರು ಎನ್ನಲಾಗಿದೆ. ಈ ಮಾಹಿತಿಯೂ ಪೊಲೀಸರ ತನಿಖೆಗೆ ನೆರವಾಗಿದೆ.
ಅಲ್ಲದೆ, ಕೃತ್ಯಕ್ಕೆ ನಿಶಾಂತ್ ಹೊಸ ಮೊಬೈಲ್ ಸಂಖ್ಯೆಯನ್ನು ಬಳಸಿದ್ದ ಸುಳಿವು ದೊರೆತಿತ್ತು. ಅದರ ಬೆನ್ನತ್ತಿದಾಗ ಆತನ ಪ್ರೇಯಸಿ ಮೀನಾಕ್ಷಿ ನಾಚಿಯಾರ್ ಹೆಸರು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರೇಯಸಿ, ತಂದೆಯಿಂದ ಚಿನ್ನ ಬಚ್ಚಿಡಲು ಸಹಾಯ?
ಕಳವು ಮಾಡಿದ್ದ ಚಿನ್ನಾಭರಣಗಳನ್ನು ಬಚ್ಚಿಡಲು ನಿಶಾಂತ್ಗೆ ಆತನ ಪ್ರೇಯಸಿ ಮೀನಾಕ್ಷಿ ಹಾಗೂ ತಂದೆ ಸುರೇಶ್ ಸಹಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೀನಾಕ್ಷಿಯಿಂದ ಈ ಹಿಂದೆ 5.5 ಕೆ.ಜಿ. ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಬಂಧನ
ನಿಶಾಂತ್ಗಾಗಿ ಪೊಲೀಸರು ವಿಶೇಷ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ನಡುವೆ ಬೆಂಗಳೂರು-ಸೇಲಂ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ನಲ್ಲಿ ಆತ ಪ್ರಯಾಣಿಸುತ್ತಿದ್ದ. ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಆತನ ಫೋಟೊವನ್ನು ಗಮನಿಸಿದ ಬಸ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಧರ್ಮಪುರಿ ಜಿಲ್ಲೆಯ ಶೇಷಂಪಟ್ಟಿ ಬಳಿ ಬಸ್ ತಡೆದು ನಿಶಾಂತ್ನನ್ನು ಬಂಧಿಸಿದ್ದಾರೆ. ಬಳಿಕ ಮಧುರೈ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಡಿಸೆಂಬರ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗುಡ್ಡದಲ್ಲಿ ಅಡಗಿಸಿಟ್ಟಿದ್ದ 6.2 ಕೆ.ಜಿ. ಚಿನ್ನ ವಶ
ಆರೋಪಿ ನಿಶಾಂತ್ ವಿಚಾರಣೆ ವೇಳೆ ನೀಡಿದ ಮಾಹಿತಿಯ ಆಧಾರದ ಮೇಲೆ ಮಧುರೈಯ ಮುನಿಯಾಂಡಿಪುರಂನ ಗೋಪಾಲಿಪುರಂ ಪ್ರದೇಶದ ಗುಡ್ಡವೊಂದರಲ್ಲಿ ಅಡಗಿಸಿಟ್ಟಿದ್ದ ಮತ್ತೊಂದು ಕಂತಿನ 6.2 ಕೆ.ಜಿ. ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಒಟ್ಟಾರೆ 11 ಕೆ.ಜಿ.ಗೂ ಅಧಿಕ ಚಿನ್ನಾಭರಣ ಕಳವು ಪ್ರಕರಣದಲ್ಲಿ ಯೂಟ್ಯೂಬರ್, ಆತನ ಪ್ರೇಯಸಿ ಹಾಗೂ ತಂದೆಯ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
