ವಾರಣಾಸಿ–ನವದೆಹಲಿ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ನವೆಂಬರ್ 15ರ ಭಾನುವಾರ ಬೆಳಗ್ಗೆ ಕಾನ್ಪುರ ಸೆಂಟ್ರಲ್ ರೈಲು ನಿಲ್ದಾಣಕ್ಕೆ ರೈಲು ಬಂದಾಗ, 12 ಮಂದಿ ತಮ್ಮ ಸಂಬಂಧಿಕರನ್ನು ಬೀಳ್ಕೊಡಲು ಹಾಗೂ ಅವರ ಲಗೇಜ್‌ಗಳನ್ನು ಇರಿಸಲು ರೈಲಿನೊಳಗೆ ಪ್ರವೇಶಿಸಿದ್ದರು.
ಈ ನಡುವೆ ರೈಲು ಹೊರಡುವ ಸಮಯವಾಗುತ್ತಿದ್ದಂತೆ ಸ್ವಯಂಚಾಲಿತ ಬಾಗಿಲುಗಳು ಲಾಕ್ ಆಗಿವೆ. ಇದರಿಂದ ರೈಲಿನೊಳಗೆ ಇದ್ದ 12 ಮಂದಿ ಕೆಳಗಿಳಿಯಲು ಸಾಧ್ಯವಾಗದೆ ಪರದಾಡಿದ್ದಾರೆ. ರೈಲ್ವೆ ಸಿಬ್ಬಂದಿಗೆ ಬಾಗಿಲು ತೆರೆಯುವಂತೆ ಮನವಿ ಮಾಡಿದರೂ, ರೈಲು ಚಲಿಸುತ್ತಿದ್ದ ಕಾರಣ ಸುರಕ್ಷತಾ ನಿಯಮಗಳ ಹಿನ್ನೆಲೆಯಲ್ಲಿ ತಕ್ಷಣ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ.
ಇಟಾವಾದಲ್ಲಿ ರೈಲು ನಿಲುಗಡೆ
ಘಟನೆ ಗಮನಕ್ಕೆ ಬರುತ್ತಿದ್ದಂತೆ ರೈಲ್ವೆ ಸಿಬ್ಬಂದಿ ತುಂಡ್ಲಾ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ನಿಯಂತ್ರಣ ಕೊಠಡಿಯ ಸೂಚನೆಯಂತೆ ಇಟಾವಾ ಜಂಕ್ಷನ್‌ನಲ್ಲಿ ರೈಲನ್ನು ನಿಲ್ಲಿಸಲಾಗಿದೆ. ಅಷ್ಟರಲ್ಲಾಗಲೇ ಕಾನ್ಪುರದಿಂದ ಸುಮಾರು 140 ಕಿ.ಮೀ. ದೂರ ರೈಲು ಪ್ರಯಾಣಿಸಿತ್ತು.
ಇಟಾವಾ ನಿಲ್ದಾಣದ ಅಧೀಕ್ಷಕ ಪಿ.ಎಂ. ಮೀನಾ, ಆರ್‌ಪಿಎಫ್ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಸಿಂಗ್ ಹಾಗೂ ಜಿಆರ್‌ಪಿ ಇನ್ಸ್‌ಪೆಕ್ಟರ್ ಯದುವೀರ್ ಸಿಂಗ್ ನೇತೃತ್ವದ ಸಿಬ್ಬಂದಿ ರೈಲಿನಲ್ಲಿದ್ದ 12 ಮಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ನಂತರ ಅವರನ್ನು ಆರ್‌ಪಿಎಫ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಘಟನೆಯ ವಿವರ ದಾಖಲಿಸಿಕೊಳ್ಳಲಾಗಿದೆ.
ತಲಾ ₹3 ಸಾವಿರ ದಂಡ
ಸೂಕ್ತ ಅನುಮತಿ ಇಲ್ಲದೆ ರೈಲು ಹತ್ತಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರೈಲ್ವೆ ವಾಣಿಜ್ಯ ವಿಭಾಗವು ಪ್ರತಿಯೊಬ್ಬರಿಂದ ತಲಾ ₹3 ಸಾವಿರದಂತೆ ಒಟ್ಟು ₹36 ಸಾವಿರ ದಂಡ ವಸೂಲಿ ಮಾಡಿದೆ. ಬಳಿಕ ಎಚ್ಚರಿಕೆ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ.
ಸಂಬಂಧಿಕರನ್ನು ಬೀಳ್ಕೊಡಲು ಹೋದವರು ತಾವೇ 140 ಕಿ.ಮೀ. ದೂರ ಪ್ರಯಾಣಿಸಬೇಕಾದ ವಿಚಿತ್ರ ಘಟನೆ ಇದೀಗ ಗಮನ ಸೆಳೆದಿದೆ. ಆಧುನಿಕ ರೈಲುಗಳ ಸ್ವಯಂಚಾಲಿತ ಬಾಗಿಲು ವ್ಯವಸ್ಥೆ ಹಾಗೂ ರೈಲ್ವೆ ಸುರಕ್ಷತಾ ನಿಯಮಗಳ ಮಹತ್ವವನ್ನು ಈ ಘಟನೆ ಮತ್ತೊಮ್ಮೆ ಎತ್ತಿಹಿಡಿದಿದೆ.
