Trending

ತಾಕತ್ ಇದ್ದರೆ ಯಡಿಯೂರಪ್ಪ ಜೈಲಿಗೆ ಹೋಗಿದ್ದೇಕೆ ಎಂಬುದನ್ನು ಜನರಿಗೆ ತಿಳಿಸಲಿ : ರಾಘವೇಂದ್ರ, ವಿಜಯೇಂದ್ರಗೆ ಮಧು ಬಂಗಾರಪ್ಪ ಸವಾಲು

Spread the love

ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ತಾಕತ್ ಇದ್ದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏಕೆ ಜೈಲಿಗೆ ಹೋಗಿದ್ದರು ಎಂಬುದನ್ನು ಜನರ ಮುಂದೆ ಸ್ಪಷ್ಟಪಡಿಸಲಿ ಎಂದು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸವಾಲು ಹಾಕಿದರು.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧವೂ ಕಿಡಿಕಾರಿದ ಮಧು ಬಂಗಾರಪ್ಪ, “ಹಾಲಪ್ಪ ನಮ್ಮ ಮನೆಗೆ ನೆಲ ಒರೆಸಲು ಬರುತ್ತಿದ್ದವರು. ಅವರಿಗೆ ನಾನೇ ಚಡ್ಡಿ ಕೊಡಿಸಿದ್ದೆ. ಈಗ ಅವರನ್ನು ಕರೆದುಕೊಂಡು ಸಂಸದರು ಓಡಾಡುತ್ತಿದ್ದಾರೆ. ಹಾಲಪ್ಪ ಟೂರಿಂಗ್ ಟಾಕೀಸ್ ಇದ್ದಂತೆ. ಇಂಥವರನ್ನು ನಂಬಿಕೊಂಡು ಸಂಸದರು ಹೋಗುತ್ತಿರುವುದು ತಮಾಷೆಯಾಗಿದೆ” ಎಂದು ವ್ಯಂಗ್ಯವಾಡಿದರು.

ತಮ್ಮ ಮತಕ್ಷೇತ್ರದ ಆನವಟ್ಟಿ ಹೋಬಳಿಯ ತೇವರಕೊಪ್ಪ ಗ್ರಾಮದಲ್ಲಿ ದೇವರಾಜ್ ಎಂಬುವವರ ಅಡಕೆ ತೋಟವನ್ನು ಕಡಿದು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಕೃತ್ಯದ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದು ಆರೋಪಿಸಿದರು.

ಬಿಜೆಪಿಯವರ ಹೇಳಿಕೆಗಳಿಗೆ ತಿರುಗೇಟು

ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವುದು ಸರಿಯಲ್ಲ. ಮಕ್ಕಳ ಎದುರಿನಲ್ಲಿ ಹರೀಶ್ ಪೂಂಜಾ ಮಾತನಾಡಿರುವ ವಿಚಾರವನ್ನೂ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಜನಪರ ಕೆಲಸಗಳನ್ನು ಮಾಡಿದ್ದಾರೆ. ಬಿಜೆಪಿ ವಿಮಾನ ನಿಲ್ದಾಣ ನಿರ್ಮಿಸಿ ಅದರ ಮೇಲೆ ಕಮಲದ ಚಿಹ್ನೆ ಇಟ್ಟಿದೆ.

ಆದರೆ ನಮ್ಮ ತಂದೆ ಮೆಗ್ಗಾನ್ ಆಸ್ಪತ್ರೆ ನಿರ್ಮಿಸಿ, ತುಂಗಾ ಅಣೆಕಟ್ಟಿನಿಂದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಬಂಗಾರಪ್ಪ ಅವರು ಸದಾ ಜನರ ಪರವಾಗಿ ಕೆಲಸ ಮಾಡಿದವರು ಎಂದು ಹೇಳಿದರು.

ತಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನೆ ಮಾಡುತ್ತಿರುವ ವಿಜಯೇಂದ್ರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ನಾನು ಶಿಕಾರಿಪುರಕ್ಕೆ ಬಂದು ರಾಜಕೀಯ ಮಾಡುತ್ತೇನೆ ಎಂದು ಸದನದಲ್ಲಿ ವಿಜಯೇಂದ್ರ ಅಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಮ್ಮ ತಂದೆ ಹಾಗೂ ನಮ್ಮ ಬೆಂಬಲಿಗರನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ನಾನು ಮಾಡಿಲ್ಲ ಎಂದು ತಿರುಗೇಟು ನೀಡಿದರು.

ಎರಡು ಮೂರು ದಿನಗಳಲ್ಲಿ ಶಿಕ್ಷಕರ ನೇಮಕಾತಿ ಸಿಇಟಿ ದಿನಾಂಕ ಪ್ರಕಟ

ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಸಿಇಟಿ ಪರೀಕ್ಷೆಯ ದಿನಾಂಕವನ್ನು ಎರಡು-ಮೂರು ದಿನಗಳಲ್ಲಿ ಘೋಷಿಸಲಾಗುವುದು. ಮುಂದಿನ ಜೂನ್‌ನಿಂದ ಕೆಪಿಎಸ್ ಶಾಲೆಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯಲ್ಲಿ 13 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕೆಪಿಎಸ್ ಶಾಲೆಗಳಿಗೆ ಬಸ್ ಸೌಲಭ್ಯ ಕಲ್ಪಿಸುವುದರಿಂದ ಸರ್ಕಾರಿ ಸಾರಿಗೆ ವ್ಯವಸ್ಥೆಯ ಅನುಕೂಲ ಮಕ್ಕಳಿಗೆ ದೊರೆಯಲಿದೆ ಎಂದರು.

 

[pj-news-ticker]