Trending

ಮದ್ಯ ಸೇವಿಸಲು ಹಣ ನೀಡದ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದ ಪುತ್ರ

Spread the love

ದಾವಣಗೆರೆ: ಮದ್ಯ ಸೇವಿಸಲು ಹಣ ನೀಡಲು ನಿರಾಕರಿಸಿದ ತಾಯಿಯನ್ನೇ ಪುತ್ರ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.

ದೊಡ್ಡಘಟ್ಟ ಗ್ರಾಮದ ಬುಳ್ಳಮ್ಮ (70) ಕೊಲೆಯಾದವರು. ಅವರ ಪುತ್ರ ಹನುಮಂತಪ್ಪ (35) ಕೊಲೆ ಆರೋಪಿಯಾಗಿದ್ದು, ಬಸವಾಪಟ್ಟಣ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮಗಳ ಮನೆಗೆ ಬಂದಿದ್ದ ತಾಯಿಯ ಕೊಲೆ

ಬುಳ್ಳಮ್ಮ ಅವರು ಪುತ್ರನ ಕಿರುಕುಳ ತಾಳಲಾರದೆ ಹರಪನಹಳ್ಳಿಯಿಂದ ದೊಡ್ಡಘಟ್ಟ ಗ್ರಾಮದಲ್ಲಿರುವ ಮಗಳ ಮನೆಗೆ ಬಂದು ವಾಸವಾಗಿದ್ದರು.

ತಾಯಿಯನ್ನು ಹುಡುಕಿಕೊಂಡು ದೊಡ್ಡಘಟ್ಟ ಗ್ರಾಮಕ್ಕೆ ಬಂದ ಹನುಮಂತಪ್ಪ, ಮದ್ಯ ಸೇವಿಸಲು ಹಣ ನೀಡುವಂತೆ ಪೀಡಿಸಿದ್ದಾನೆ. ಆದರೆ ತಾಯಿ ಹಣ ನೀಡಲು ನಿರಾಕರಿಸಿದಾಗ ಆಕ್ರೋಶಗೊಂಡ ಆತ ದೊಣ್ಣೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತನ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ

ಆರೋಪಿ ಹನುಮಂತಪ್ಪ ಈ ಹಿಂದೆಯೂ ಹಣದ ವಿಚಾರವಾಗಿ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಆತ, ಎರಡು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಬಸವಾಪಟ್ಟಣ ಪೊಲೀಸ್ ಠಾಣೆಯ ಪಿಐ ಇಮ್ತಿಯಾಜ್ ಮಾತನಾಡಿ, ತಾಯಿಯ ಬಳಿ ಮದ್ಯ ಸೇವಿಸಲು ಹಣ ಕೇಳಿದ್ದ ಹನುಮಂತಪ್ಪ, ಹಣ ನೀಡದಿದ್ದಕ್ಕೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

 

[pj-news-ticker]