Trending

ರಿಪ್ಪನ್‌ಪೇಟೆ: ಸಾಲದ ಹೊರೆ, ಬೆಳೆ ನಷ್ಟ: ವಿಷ ಸೇವಿಸಿ ರೈತ ಆತ್ಮಹತ್ಯೆ

Spread the love

ರಿಪ್ಪನ್‌ಪೇಟೆ: ಮಳೆಯ ಕೊರತೆಯಿಂದ ಬೆಳೆ ನಷ್ಟವಾಗಿ, ಸಾಲ ಮರುಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಬಸವಾಪುರ ಗ್ರಾಮದ ಸುರೇಶ್ ಟಿ. (59) ಎಂದು ಗುರುತಿಸಲಾಗಿದೆ. ಇವರು 3.3 ಎಕರೆ ಜಮೀನಿನಲ್ಲಿ ಅಡಿಕೆ, ಭತ್ತ ಹಾಗೂ ಕಬ್ಬು ಬೆಳೆದಿದ್ದರು. ಆದರೆ ಈ ಬಾರಿ ಮಳೆಯ ಕೊರತೆಯಿಂದ ಬೆಳೆಗಳು ಒಣಗಿ ಅಪಾರ ನಷ್ಟವಾಗಿತ್ತು.

ಕೃಷಿಗಾಗಿ ಅರಸಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹75 ಸಾವಿರ ಸಾಲ ಪಡೆದಿದ್ದ ಅವರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯರಿಂದ ಸುಮಾರು ₹5ರಿಂದ ₹6 ಲಕ್ಷದವರೆಗೆ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಬೆಳೆ ನಷ್ಟದಿಂದ ಸಾಲ ತೀರಿಸಲಾಗದೆ ಮನನೊಂದಿದ್ದರು.

ನವೆಂಬರ್ 5ರಂದು ಮಧ್ಯಾಹ್ನ ಮನೆಯ ಮುಂಭಾಗದ ಜಮೀನಿನಲ್ಲಿ ಕಳೆನಾಶಕ ಸೇವಿಸಿದ್ದರು. ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 8.30ರ ಸುಮಾರಿಗೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪುತ್ರ ಕಾರ್ತಿಕ್ ನೀಡಿದ ದೂರಿನ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

[pj-news-ticker]