ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 53 ವರ್ಷದ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಒಂದು ವಾರದ ಅವಧಿಯಲ್ಲಿ ಹತ್ಯೆ ಮಾಡಿರುವ ಭೀಕರ ಘಟನೆ ರಾಜಾಜಿನಗರದಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು ಪತ್ನಿ ಸುನೀತಾ, ಅತ್ತೆ ರೂಪವತಿ, ಭಾವಮೈದುನರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಬಾಲಕ ಪುನೀತ್ ಎಂದು ಗುರುತಿಸಲಾಗಿದೆ.
ಆರೋಪಿ ಇಂದುಶೇಖರ್ ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ. ಪತ್ನಿ ತವರು ಮನೆಗೆ ಹೋಗುವ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪತ್ನಿಯ ಕುಟುಂಬದವರು ಆಕೆಗೆ ಬೆಂಬಲ ನೀಡುತ್ತಿದ್ದುದರಿಂದ ಕೋಪಗೊಂಡ ಶೇಖರ್, ಅವರನ್ನೆಲ್ಲ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ.
ಮೊದಲು ಪತ್ನಿಯನ್ನು ಒರಳುಕಲ್ಲಿನಿಂದ ಹೊಡೆದು ಕೊಲೆ ಮಾಡಿ, ಮೃತದೇಹವನ್ನು ನಂದಿ ಬೆಟ್ಟದ ಸಮೀಪ ಎಸೆದಿದ್ದಾನೆ. ಬಳಿಕ ಭಾವಮೈದುನರನ್ನು ಮನೆಗೆ ಆಹ್ವಾನಿಸಿ ಹತ್ಯೆ ಮಾಡಿದ್ದು, ನಂತರ ಕುಟುಂಬದ ಇತರ ಸದಸ್ಯರನ್ನೂ ಕೊಂದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಪತ್ತೆ ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಇಂದುಶೇಖರ್ ಮೇಲೆ ಅನುಮಾನ ಮೂಡಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಏಳು ಕೊಲೆಗಳ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈಗಾಗಲೇ ಒಂದು ಮೃತದೇಹ ಪತ್ತೆಯಾಗಿದ್ದು, ಉಳಿದ ಆರು ಮೃತದೇಹಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕೊಲೆಗಳಿಗೆ ಬಳಸಿದ್ದ ಒರಳುಕಲ್ಲು ಹಾಗೂ ಮೃತದೇಹ ಸಾಗಿಸಲು ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯಲ್ಲಿ ಕುಟುಂಬದ ಮತ್ತೊಬ್ಬ ಸದಸ್ಯನ ಪಾತ್ರವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶ್ರೀರಾಮಪುರ ಮತ್ತು ರಾಜಾಜಿನಗರ ಪೊಲೀಸರು ಪ್ರತ್ಯೇಕವಾಗಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
