ಶಿವಮೊಗ್ಗ: ಹಾಲು ಉತ್ಪಾದಕ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ₹8 ಹೆಚ್ಚಿಸಿರುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದರ ಜೊತೆಗೆ ರೈತರ ಇತರ ಬೇಡಿಕೆಗಳನ್ನೂ ಸರ್ಕಾರ ಈಡೇರಿಸಬೇಕು ಎಂದು ಹಾಲು ಉತ್ಪಾದಕರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಜಿ. ಕರಕುಚ್ಚಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 7ರಂದು ಹಾಲಿನ ದರ ಹೆಚ್ಚಳ ಹಾಗೂ ಪ್ರೋತ್ಸಾಹಧನವನ್ನು ₹5ರಿಂದ ₹10ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿ ಸುಮಾರು 1,000 ರೈತರು ಪಾದಯಾತ್ರೆ ನಡೆಸಿ ಪ್ರತಿಭಟಿಸಿದ್ದರು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಯೂ ಹೋರಾಟ ನಡೆಸಲಾಗಿತ್ತು. ರೈತರ ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರ ಪ್ರತಿ ಲೀಟರ್ಗೆ ₹8 ಹೆಚ್ಚಿಸಿದ್ದು, ಇದರಲ್ಲಿ ₹7 ರೈತರಿಗೆ ಹಾಗೂ ₹1 ಹಾಲು ಒಕ್ಕೂಟಕ್ಕೆ ನೀಡಲು ನಿರ್ಧರಿಸಿದೆ ಎಂದರು.
ಕೇಂದ್ರ ಸರ್ಕಾರವೂ ಹಾಲು ಉತ್ಪಾದಕರಿಗೆ ₹5 ಪ್ರೋತ್ಸಾಹಧನ ನೀಡಬೇಕು. ರೈತರಿಗೆ ₹10 ಲಕ್ಷ ವಿಮೆ ಸೌಲಭ್ಯ ಕಲ್ಪಿಸಬೇಕು. ಕೃಷಿ ಮತ್ತು ಹೈನುಗಾರಿಕೆ ಸಾಲ ಮನ್ನಾ ಮಾಡಬೇಕು. ಸಣ್ಣ ರೈತರಿಗೂ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಗೌರವ ಅಧ್ಯಕ್ಷ ಜಯರಾಮ್ ಗೋಂದಿ ಮಾತನಾಡಿ, ಹಲವು ವರ್ಷಗಳ ಬೇಡಿಕೆಯ ಬಳಿಕ ಹಾಲಿನ ದರ ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಿರುವ ಸರ್ಕಾರ ಹಾಗೂ ಇದಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ತಿಮ್ಲಾಪುರ ಲೋಕೇಶ್, ಪ್ರಧಾನ ಕಾರ್ಯದರ್ಶಿ ಗಜೇಂದ್ರ, ಭಾಗ್ಯ, ರಾಮಚಂದ್ರ, ವೆಂಕಟೇಶ್, ಮಂಜುನಾಥ, ದಾನಪ್ಪ, ರಾಜು, ದಾದಾಫೀರ್, ಪ್ರಭು ಹಾಗೂ ಅರುಣ್ ಕುಮಾರ್ ಉಪಸ್ಥಿತರಿದ್ದರು.
