Trending

ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕೆಂದು ಮೊಬೈಲ್ ಟವರ್ ಏರಿದ ಯುವಕ

Spread the love

ಕಲಬುರಗಿ: ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು. ಇಲ್ಲವಾದರೆ ಮೊಬೈಲ್ ಟವರ್‌ನಿಂದ ಕೆಳಗೆ ಹಾರಿ ಬೀಳುವುದಾಗಿ ಬೆದರಿಸಿ ಯುವಕನೊಬ್ಬ ಟವರ್ ಏರಿ ಕುಳಿತ ಘಟನೆ ನಿಂಬರ್ಗಾ ಸಮೀಪದ ಮಾಡಿಯಾಳ ಗ್ರಾಮದಲ್ಲಿ ಶನಿವಾರ ನಡೆದಿದೆ.

ಶಾಹಬಾದ್ ತಾಲೂಕಿನ ತೊನ್ನಸಳ್ಳಿ ಗ್ರಾಮದ ಮಹೇಶ ತಂದೆ ಮಲ್ಲಪ್ಪ ಭಜಂತ್ರಿ ಟವರ್ ಏರಿದ ಯುವಕ.

ತನ್ನ ತಾಯಿಯ ತವರೂರು ಮಾಡಿಯಾಳ ಗ್ರಾಮಕ್ಕೆ ಶುಕ್ರವಾರ ಬಂದಿದ್ದ ಮಹೇಶ, ತನ್ನ ಪ್ರೀತಿಯ ವಿಚಾರವನ್ನು ತಾಯಿಯ ಸಹೋದರರಾದ ರಾಮು ಭಜಂತ್ರಿ ಹಾಗೂ ಭೀಮಾಶಂಕರ ಭಜಂತ್ರಿ ಅವರ ಬಳಿ ತಿಳಿಸಿದ್ದಾನೆ. ಈ ವೇಳೆ ಅವರು ‘ಮುಂದೆ ನೋಡೋಣ’ ಎಂದು ಆತನನ್ನು ಸಮಾಧಾನಪಡಿಸಿದ್ದರು ಎನ್ನಲಾಗಿದೆ.

ಆದರೆ ಇದರಿಂದ ನಿರಾಶೆಗೊಂಡ ಮಹೇಶ, ಯಾರ ಗಮನಕ್ಕೂ ಬಾರದಂತೆ ಗ್ರಾಮದ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ. ಬಳಿಕ ತನ್ನ ಸಹೋದರ ಮಾವಂದಿರಿಗೆ ಕರೆ ಮಾಡಿ, ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು. ಇಲ್ಲವಾದರೆ ಟವರ್‌ನಿಂದ ಕೆಳಗೆ ಬೀಳುವುದಾಗಿ ಹೇಳಿದ್ದಾನೆ.

ಯುವಕ ಟವರ್ ಏರಿರುವ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಎರಡು ಗಂಟೆಗೂ ಹೆಚ್ಚು ಕಾಲ ಮಹೇಶನನ್ನು ಕೆಳಗೆ ಇಳಿಯುವಂತೆ ಮನವೊಲಿಸಲು ಪ್ರಯತ್ನಿಸಲಾಯಿತು. ಗ್ರಾಮಸ್ಥರು ಕೂಡ ಆತ ಕೆಳಗೆ ಬಂದರೆ ತಾನು ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಿಸುವುದಾಗಿ ಭರವಸೆ ನೀಡಿದರು. ಆದರೂ ಮಹೇಶ ಟವರ್‌ನಿಂದ ಕೆಳಗಿಳಿಯಲು ಒಪ್ಪಲಿಲ್ಲ.

ಕೊನೆಗೆ ಸಹೋದರ ಮಾವ ದೇವರ ಹೆಸರಿನಲ್ಲಿ ಆಣೆ ಮಾಡಿ, ತಾನು ಪ್ರೀತಿಸಿದ ಯುವತಿಯೊಂದಿಗೇ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ ಬಳಿಕ ಮಹೇಶ ಟವರ್‌ನಿಂದ ಕೆಳಗೆ ಇಳಿದು ಬಂದಿದ್ದಾನೆ.

ಯುವಕ ಸುರಕ್ಷಿತವಾಗಿ ಕೆಳಗೆ ಬಂದ ಹಿನ್ನೆಲೆಯಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

[pj-news-ticker]