ಶಿವಮೊಗ್ಗ : ಕೊಳೆತ ಹಾಗೂ ಫಂಗಸ್ ಹಿಡಿದ ಹಣ್ಣುಗಳನ್ನು ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಗರದ ತಿಲಕನಗರದಲ್ಲಿರುವ ತನು ಜ್ಯೂಸ್ ಸೆಂಟರ್ ಮೇಲೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಉಪವಿಭಾಗಾಧಿಕಾರಿ ಡಾ. ಮೈತ್ರಿ, ತಹಶೀಲ್ದಾರ್ ರಾಜೀವ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಜ್ಯೂಸ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಗ್ರೇಪ್ಸ್, ಚಿಕ್ಕು, ಡ್ರ್ಯಾಗನ್ ಫ್ರೂಟ್, ಸೇಬು, ದಾಳಿಂಬೆ ಸೇರಿದಂತೆ ಹಲವು ಹಣ್ಣುಗಳು ಕೊಳೆತ ಹಾಗೂ ಹಾಳಾದ ಸ್ಥಿತಿಯಲ್ಲಿ ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಹಣ್ಣುಗಳ ಮೇಲೆ ಫಂಗಸ್ ಹಾಗೂ ಬೂಷ್ಟಿನಂತಹ ಬೆಳವಣಿಗೆ ಕಂಡುಬಂದಿದ್ದು, ಇವುಗಳನ್ನು ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿತ್ತೆಂಬುದು ಪರಿಶೀಲನೆಯ ವೇಳೆ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಫ್ರೀಜರ್ನಲ್ಲಿಯೂ ಕಳಪೆ ಸ್ಥಿತಿಯಲ್ಲಿದ್ದ ಹಣ್ಣುಗಳು ಪತ್ತೆಯಾಗಿವೆ.
ಕಡಿಮೆ ದರದಲ್ಲಿ ವಿವಿಧ ಬಗೆಯ ಜ್ಯೂಸ್ಗಳು ದೊರೆಯುತ್ತವೆ ಎಂಬ ಕಾರಣಕ್ಕೆ ಈ ಜ್ಯೂಸ್ ಸೆಂಟರ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಪರಿಶೀಲನೆ ವೇಳೆ ಒಳಭಾಗದಲ್ಲಿ ಕಳಪೆ ಸ್ಥಿತಿಯಲ್ಲಿದ್ದ ಹಣ್ಣುಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಹಣ್ಣುಗಳನ್ನು ಎಷ್ಟು ದಿನಗಳಿಂದ ಸಂಗ್ರಹಿಸಿಡಲಾಗಿತ್ತು ಎಂಬುದನ್ನು ಮೇಲ್ನೋಟದ ಪರಿಶೀಲನೆಯಿಂದ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಣ್ಣುಗಳ ಮಾದರಿಗಳನ್ನು ವಿಶ್ಲೇಷಣೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಅವುಗಳ ಗುಣಮಟ್ಟದ ಕುರಿತು ಸ್ಪಷ್ಟತೆ ದೊರೆಯಲಿದೆ ಎಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜ್ಯೂಸ್ ಸೆಂಟರ್ನಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿತ್ತೇ ಎಂಬ ಪ್ರಶ್ನೆ ಮೂಡಿದ್ದು, ಪರೀಕ್ಷಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
