ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಕಾರ್ಯಕ್ರಮಕ್ಕೆ ಪರಿಸರ ಸಂಬಂಧಿತ ಕಾನೂನು ಸಂಕಷ್ಟ ಎದುರಾಗಿದೆ.
ಬೆಂಗಳೂರು ಹೊರವಲಯದ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ಅಥವಾ ಅಗತ್ಯ ಅನುಮತಿ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (KSPCB) ದೂರು ಸಲ್ಲಿಸಿದ್ದಾರೆ.
ಹಿಂದಿನ ಸೀಸನ್ ವೇಳೆ ಪರಿಸರ ನಿಯಮಗಳ ಉಲ್ಲಂಘನೆ ನಡೆದಿದ್ದು, ವಿಧಿಸಲಾಗಿದ್ದ ಪರಿಸರ ಪರಿಹಾರ ದಂಡದ ಮೊತ್ತವೂ ಬಾಕಿ ಇದೆ. ಹಳೆಯ ಲೋಪಗಳನ್ನು ಸರಿಪಡಿಸಿ, ಬಾಕಿ ದಂಡ ಪಾವತಿಸುವವರೆಗೆ ಹೊಸ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚಿನ ವರದಿಗಳಲ್ಲಿಯೂ ಬಿಗ್ಬಾಸ್ ಕನ್ನಡ ಸೀಸನ್ 13ರ ಅನುಮತಿಗೆ ಮುನ್ನ ಜಾಲಿವುಡ್ ಸಂಸ್ಥೆಗೆ ಬಾಕಿ ಇರುವ ದಂಡ ಪಾವತಿಸುವಂತೆ ಸೂಚಿಸಿರುವುದರಿಂದ ಕಾರ್ಯಕ್ರಮದ ಆರಂಭದ ಕುರಿತು ಅನಿಶ್ಚಿತತೆ ಮುಂದುವರಿದಿದೆ.
‘ಮೊದಲು ಸಂಪೂರ್ಣ ಪರಿಸರ ನಿಯಮಗಳ ಪಾಲನೆ, ಬಳಿಕ ಕಾರ್ಯಕ್ರಮಕ್ಕೆ ಅನುಮತಿ’ ಎಂಬ ನೀತಿಯನ್ನು KSPCB ಕಟ್ಟುನಿಟ್ಟಾಗಿ ಅನುಸರಿಸಬೇಕು. ಲೋಪಗಳನ್ನು ಸರಿಪಡಿಸುವವರೆಗೆ ಯಾವುದೇ ಅನುಮತಿ ನೀಡಬಾರದು ಎಂದು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
