ಶಿವಮೊಗ್ಗ, ಆ.31: ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿರುವ ಹಾಗೂ ಅವಕಾಶ ಕಲ್ಪಿಸಿರುವ ಹಲವು ಅಂಶಗಳನ್ನು ನ್ಯಾಯಾಲಯಗಳು ಒಪ್ಪದಿರುವುದು ವಿಷಾದನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಸಂಜೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ‘ಮೆಮರೆಬಲ್ ಟ್ರಯಲ್ಸ್’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದೇಶ-ವಿದೇಶಗಳಲ್ಲಿ ನಡೆದ ಪ್ರಮುಖ ನ್ಯಾಯಾಂಗ ಪ್ರಕರಣಗಳ 21 ಉದಾಹರಣೆಗಳನ್ನು ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡಿದವರು ಅನ್ಯಾಯದ ತೀರ್ಪುಗಳಿಂದ ಶಿಕ್ಷೆ ಅನುಭವಿಸಿದ, ಕೆಲವರು ನೇಣಿಗೇರಿದ ಘಟನೆಗಳನ್ನೂ ಕೃತಿ ದಾಖಲಿಸಿದೆ. ವಿದೇಶಗಳಲ್ಲಿಯೂ ತಮ್ಮ ವಿಚಾರ ಹಾಗೂ ಸತ್ಯವನ್ನು ಪ್ರತಿಪಾದಿಸಿದ ಚಿಂತಕರು, ವಿಜ್ಞಾನಿಗಳು ಶಿಕ್ಷೆಗೆ ಒಳಗಾಗಿ ಜೈಲಿನಲ್ಲೇ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ ಎಂದು ಹೇಳಿದರು.
ಸತ್ಯವನ್ನು ತಿರುಚಿ ಅಥವಾ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ತೀರ್ಪುಗಳು ಹೊರಬಂದ ಸಂದರ್ಭಗಳನ್ನೂ ಕೃತಿ ಪರಿಚಯಿಸುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ನ್ಯಾಯಾಂಗ ವ್ಯವಸ್ಥೆ, ಸಂವಿಧಾನದ ಆಶಯ ಹಾಗೂ ಅದರಲ್ಲಾಗುತ್ತಿರುವ ಬದಲಾವಣೆಗಳ ಕುರಿತು ಅರಿವು ಮೂಡಲಿದೆ ಎಂದರು.
ಹಿರಿಯ ನ್ಯಾಯವಾದಿ ಬಸಪ್ಪ ಗೌಡ ಮಾತನಾಡಿ, ‘ಮೆಮರೆಬಲ್ ಟ್ರಯಲ್ಸ್’ ವಿಶಿಷ್ಟ ಕೃತಿಯಾಗಿದೆ. ಸತ್ಯವನ್ನು ಪ್ರತಿಪಾದಿಸಿದ ಸಾಕ್ರೆಟಿಸ್ ಕೂಡ ಜೈಲಿನಲ್ಲೇ ಸಾವಿಗೀಡಾದರು. ಇಂತಹ ವ್ಯವಸ್ಥೆಯಲ್ಲಿ ಸಾಮಾನ್ಯ ಜನರ ಸತ್ಯಕ್ಕೆ ಎಷ್ಟು ಬೆಲೆ ಸಿಗಬಹುದು ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಸಿಬಿಆರ್ ಕಾನೂನು ಕಾಲೇಜಿನ ಪ್ರಾಚಾರ್ಯೆ ಅನಲಾ ಮಾತನಾಡಿ, ನ್ಯಾಯಾಂಗವು ಕಾನೂನಿನ ಆಧಾರದಲ್ಲಿ ತೀರ್ಪು ನೀಡಬೇಕಾದರೂ ಅದು ಎಲ್ಲಿ ಎಡವುತ್ತಿದೆ ಹಾಗೂ ಸಂವಿಧಾನದ ಆಶಯಗಳು ಎಲ್ಲಿ ದಾರಿ ತಪ್ಪುತ್ತಿವೆ ಎಂಬುದನ್ನು ಕೃತಿ ಹಲವು ಉದಾಹರಣೆಗಳ ಮೂಲಕ ವಿಶ್ಲೇಷಿಸಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಇದು ಮಾರ್ಗದರ್ಶಿ ಕೃತಿಯಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬ್ರಿಟಿಷರ ಕಾಲದ ಅನ್ಯಾಯದ ಶಿಕ್ಷೆಗಳ ಕುರಿತು ಇಂದಿನ ಯುವಜನತೆ ತಿಳಿದುಕೊಳ್ಳಬೇಕಿದೆ. ಈ ವಿಷಯಗಳ ಅಧ್ಯಯನಕ್ಕೆ ಕೃತಿ ಪೂರಕ ಮಾಹಿತಿಯನ್ನು ಒದಗಿಸುತ್ತದೆ ಎಂದರು.
ಡಿಎಸ್ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿ, ನ್ಯಾಯಕ್ಕಾಗಿ ನಡೆದ ಹೋರಾಟಗಳು ಹಾಗೂ ನ್ಯಾಯಾಂಗ, ಕಾನೂನು ಮತ್ತು ಸಮಾಜದ ನಡುವಿನ ಸಂಬಂಧವನ್ನು ಕೃತಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ ಎಂದರು.
ಪ್ರಾಧ್ಯಾಪಕ ರಾಜಶೇಖರ್ ಕಿಗ್ಗಾ ಮಾತನಾಡಿ, ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದರೂ ಇಂದಿನ ರಾಜಕಾರಣಿಗಳ ಕಾರ್ಯವೈಖರಿಯಲ್ಲಿ ಹಿಂದಿನ ಆಡಳಿತಗಾರರ ಛಾಯೆ ಕಾಣಿಸುತ್ತಿದೆ. ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂದು ಕಾಯುವುದು ನಿರಾಸೆ ಮೂಡಿಸುವಂತಾಗಿದೆ ಎಂದರು.
ಪತ್ರಕರ್ತ ಹರ್ಷಕುಮಾರ್ ಕುಗ್ವೆ, ಪೀಪಲ್ ಲಾಯರ್ಸ್ ಗಿಲ್ಡ್ ಸಂಚಾಲಕ ನ್ಯಾಯವಾದಿ ಕೆ.ಪಿ. ಶ್ರೀಪಾಲ್ ಮಾತನಾಡಿದರು. ಹಿರಿಯ ನ್ಯಾಯವಾದಿ ಜಿ.ಎಸ್. ನಾಗರಾಜ್ ಉಪಸ್ಥಿತರಿದ್ದರು. ನ್ಯಾಯವಾದಿ ಶಹರಾಜ್ ಸಿದ್ದಿಕಿ ಸ್ವಾಗತಿಸಿದರು.
